

ಬಳ್ಳಾರಿ : ಬೆಳಗಾವಿಯಲ್ಲಿ ಅಮಾನವೀಯವಾಗಿ ನಡೆದ ಮಹಿಳೆಯ ಬೆತ್ತಲೆ ಪ್ರಕರಣ ಮತ್ತು ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಹೆಣ್ಣು ಶಿಶು ಭ್ರೂಣಹತ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ರಾಯಲ್ ವೃತ್ತದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಈ ವೇಳೆ ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ಮಾತನಾಡಿ, ಹೆಣ್ಣು ಭ್ರೂಣಹತ್ಯೆ ಸಾಮಾಜಿಕ ಪಿಡುಗಾಗಿದ್ದು ಅದನ್ನು ತಡೆಗಟ್ಟುವಲ್ಲಿ ಕಠಿಣವಾದ ಕಾನೂನು ಕ್ರಮಗಳಲ್ಲದೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ತುರ್ತಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟಲಿಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಕಠಿಣವಾದ ಕಾನೂನುಗಳಿವೆ. ಸ್ಕಾೃನಿಂಗ್ ಕೇಂದ್ರಗಳ ಮೇಲೆ ನಿಗಾವಹಿಸಬೇಕು. ರಾಜ್ಯಮಟ್ಟದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಸದಸ್ಯತ್ವದ ಸಮಿತಿ ರಚನೆ ಮಾಡಲಾಗಿದೆ. ಆ ಸಮಿತಿ ಸಮರ್ಪಕವಾಗಿ ಕೆಲಸ ಮಾಡದೆ ಇರುವ ಕಾರಣಕ್ಕಾಗಿಯೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಭ್ರೂಣ ಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣಗಳ ಹತ್ಯೆ ಪ್ರಕರಣಗಳು ಬಯಲಿಗೆ ಬರುತ್ತಿವೆ. ಸಾವಿರ ಪುರುಷರಿಗೆ ಕೆಲ ಜಿಲ್ಲೆಗಳಲ್ಲಿ 760 ಹೆಣ್ಣು ಮಕ್ಕಳಿರುವುದು ತುಂಬಾ ಆತಂಕಕಾರಿ ವಿಷಯ ಎಂದು ತಿಳಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಧಳಿಸಿದ್ದು ಖಂಡನೀಯ. ಇದು ಸ್ತ್ರೀಕುಲಕ್ಕೆ ಮಾಡಿದ ಅಪಮಾನ. 12ನೇ ಶತಮಾನದಲ್ಲಿ ಬಸವಣ್ಣನವರು ಸ್ತ್ರೀಸಮಾನತೆ ಸಾರಿದ ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳು, ಅತ್ಯಾಚಾರ ನಡೆಯುತ್ತಿದ್ದರು ಸರ್ಕಾರ ಸುಮ್ಮನೆ ಕುಳಿತಿದೆ. ಹೆಣ್ಣುಮಕ್ಕಳಿಗೆ ರಕ್ಷಣೆ ನೀಡುವಂತಹ ಕೆಲಸ ಆಗಬೇಕಿದೆ ಎಂದರು.
ಮಹಿಳೆಯರಿಗೆ ಸ್ವತಂತ್ರ ನೀಡುವುದೊಂದೆ ಅಲ್ಲದೆ ಸಮಗ್ರ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಹೆಣ್ಣುಮಕ್ಕಳ ರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ, ರಾಜ್ಯ ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ ಗುರುಲಿಂಗನಗೌಡ, ವಿರೂಪಾಕ್ಷಿ ಗೌಡ, ಎಚ್. ಹನುಮಂತಪ್ಪ, ಡಾಕ್ಟರ್ ಮಹಿಪಾಲ್, ರಾಮಚಂದ್ರಪ್ಪ, ಶಂಕ್ರಪ್ಪ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸುಗುಣಾ.ಕೆ, ಜಿಲ್ಲಾ ಉಪಾಧ್ಯಕ್ಷೆ ಸಾಧನಾ ಹಿರೇಮಠ, ಜಿಲ್ಲಾ ಕಾರ್ಯದರ್ಶಿ ಸುಮಾರೆಡ್ಡಿ, ಅಲವೇಲು, ವಿಜಯಲಕ್ಷ್ಮಿ, ಪುಷ್ಪಲತಾ, ರಬಿಯಾ ಟಿ, ಪ್ರಕಾಶ್ ಗೌಡ, ವೆಂಕಟೇಶ್,ರಾಮಾಂಜಿನಿ, ರಾಮ್ ಪ್ರಸಾದ್, ಮಲ್ಲಿಕಾರ್ಜುನ್ ಗೌಡ ಮತ್ತಿತರರಿದ್ದರು.