ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

BLY- 11-3
ಕಾಂಗ್ರೆಸ್ ಸಂಸದ ಧೀರಜ್ ಸಾಹು ಅಕ್ರಮದ ಹಣ ಇಡಿ ತನಿಖೆಗೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಬಳ್ಳಾರಿಯ ರಾಯಲ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಗುತ್ತಿಗನೂರು ವಿರುಪಾಕ್ಷಗೌಡ, ಗುರುಲಿಂಗನ ಗೌಡ, ಅನಿಲ್ ನಾಯ್ಡು, ಸುಗುಣಾ ಇನ್ನಿತರರಿದ್ದರು.
Published on

ಬಳ್ಳಾರಿ : ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರ ಮನೆಯಲ್ಲಿ ಐಟಿ ದಾಳಿ ವೇಳೆಯಲ್ಲಿ 335 ಕೋಟಿ ರೂ.ಗೂ ಹೆಚ್ಚಿನ ಹಣ ವಶಕ್ಕೆ ಪಡೆದಿದ್ದು ಅಕ್ರಮ ಹಣ ಸಂಗ್ರಹಿಸಿರುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಬಳ್ಳಾರಿ ನಗರದ ರಾಯಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಜವಳಿ ನಿಗಮದ ಮಾಜಿ ಅಧ್ಯಕ್ಷ ಗುತ್ತಿಗನೂರು ವಿರುಪಾಕ್ಷಗೌಡ ಮಾತನಾಡಿ, ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರ ಮನೆಯಲ್ಲಿ ಐಟಿ ರೇಡ್ ವೇಳೆಯಲ್ಲಿ ಕೋಟ್ಯಂತರ ರೂ. ಹಣ ದೊರೆತಿರುವುದು ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿದೆ. ಇಂತಂಹ ಅಕ್ರಮ ಹಣವನ್ನು ಚುನಾವಣೆಯಲ್ಲಿ ಬಳಸಲಾಗುತ್ತಿದೆ. ಆದ್ದರಿಂದ ಈ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಇಡಿಗೆ ವಹಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗುರುಲಿಂಗನ ಗೌಡ ಮಾತನಾಡಿ, ದೇಶಾದ್ಯಂತ ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರ ಪ್ರಕರಣವನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಧೀರಜ್ ಅವರು ಅಕ್ರಮವಾಗಿ ಹಣವನ್ನು ಸಂಪಾದಿಸಿದ್ದಾರೆ ಅವರ ಪ್ರಕರಣವನ್ನು ಇಡಿಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಮುಖಂಡರಾದ ಅನಿಲ್ ನಾಯ್ಡು ಅವರು ಮಾತನಾಡಿ, ಧೀರಜ್ ಅವರ ಮನೆಯಲ್ಲಿ ಐಟಿ ರೇಡ್ ಆಗಿದ್ದು ಸುಮಾರು 300 ಕೋಟಿಗೂ ಹೆಚ್ಚಿನ ಹಣ ದೊರೆತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಮಾತ್ರ ಅಲ್ಲದೆ ‘ಇಂಡಿಯಾ’ ಒಕ್ಕೂಟ ಕೂಡ ಉತ್ತರ ನೀಡಬೇಕಾಗಿದೆ. ದೇಶದಲ್ಲಿನ ಕಳ್ಳರು ಎಲ್ಲ ಸೇರಿ ಒಕ್ಕೂಟ ರಚನೆ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಜಿಲ್ಲಾ ಕಾರ್ಯದರ್ಶಿ ಅಲುವೆಲಮ್ಮ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸುಗುಣಾ, ಬಳ್ಳಾರಿ ನಗರದ ಅಧ್ಯಕ್ಷ ಕೆ.ಬಿ.ವೆಂಕಟೇಶ್ವರ, ಮುಖಂಡರಾದ ಹನುಮಂತ ಗುಡಿಗಂಟೆ, ಮೋಹನ್ ಅಂಜಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net