ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ

BJP RAITA MORCHA
ವಿಜಯಪುರದ ಜಿಲ್ಲಾಡಳಿತಕ್ಕೆ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಆರ್.ಎಸ್. ಪಾಟೀಲ ಕೂಚಬಾಳ, ಕಾಸುಗೌಡ ಬಿರಾದಾರ, ವಿಜುಗೌಡ ಪಾಟೀಲ ಮತ್ತಿತರರಿದ್ದಾರೆ.
Published on

ವಿಜಯಪುರ: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಡಳಿತ ಕಚೇರಿವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ಕಾಂಗ್ರೆಸ್ ವಿರುದ್ಧ ಘೋಷಣೆ ಮೊಳಗಿಸಲಾಯಿತು. ರೈತ ವಿರೋಧಿ ನೀತಿಗೆ ಖಂಡನೆ ವ್ಯಕ್ತಪಡಿಸಲಾಯಿತು. ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಮಾತನಾಡಿ, ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿದೆ. ಕೇವಲ ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ಯಾಮಾರಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ರೈತರನ್ನು ಸಶಕ್ತರನ್ನಾಗಿ ಮಾಡುವ ಕಾರ್ಯ ಮಾಡುತ್ತಿಲ್ಲ. ರೈತರಿಗೆ ಬಲ ತುಂಬಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ರೂಪಿಸಲಾಗಿದ್ದ ಯೋಜನೆಗಳನ್ನು ಕೈ ಬಿಟ್ಟು ದ್ವೇಷ ರಾಜಕಾರಣ ಮಾಡುತ್ತಿದೆ. ಇನ್ನೊಂದೆಡೆ ನಾಡಿಗೆ ಅನ್ನ ನೀಡುವ ಅನ್ನದಾತನಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರು ತಾವು ಬೆಳೆದ ಬೆಳೆಗಳನ್ನು ತಮಗಿಷ್ಟದಂತೆ ಮಾರಾಟ ಮಾಡಲು ಸ್ವಾತಂತ್ರ್ಯ ಕೊಡುವ ನಿಟ್ಟಿನಲ್ಲಿ ಬಿಜೆಪಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿತ್ತು, ಆದರೆ ಈಗ ದ್ವೇಷ ರಾಜಕಾರಣದ ಭಾಗವಾಗಿ ಆ ತಿದ್ದುಪಡಿಯನ್ನು ರದ್ದುಗೊಳಿಸಿ ರೈತ ವಿರೋಧ ನೀತಿಯನ್ನು ಅನುಸರಿಸಿದೆ, ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡುವ ಅಧಿಕಾರವೂ ಇಲ್ಲವೇ? ಎಂದು ಪ್ರಶ್ನಿಸಿದರು.

ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸಂಜಯ ಪಾಟೀಲ ಕನಮಡಿ ಮಾತನಾಡಿ, ರೈತ ಪರವಾದ ರೈತ ವಿದ್ಯಾನಿಧಿ ಜಾರಿಗೆ ಅನಾಸಕ್ತಿ ತೋರುತ್ತಿರುವ ಕಾಂಗ್ರೆಸ್ ಸರ್ಕಾರ, ವಿದ್ಯುತ್ ದರ ಏರಿಕೆ ಮಾಡುವ ಮೂಲಕ ರೈತರಿಗೆ ದೊಡ್ಡ ಮಟ್ಟದ ಹೊರೆ ಹಾಕಿದೆ. ಈಗ ವಿದ್ಯುತ್ ದರ ಏರಿಕೆಯಿಂದ ಪಂಪ್‌ಸೆಟ್ ಬಳಕೆ ಹೊರೆಯಾಗಿ ಪರಿಣಮಿಸಿದೆ. ಹತ್ತಿ ಉದ್ಯಮ, ಅಕ್ಕಿ ಮಿಲ್ ಮೊದಲಾದವುಗಳು ವಿದ್ಯುತ್ ದರ ಏರಿಕೆಯಿಂದ ನಲಗುತ್ತಿದ್ದು, ಇದರ ಪರಿಣಾಮ ರೈತರ ಮೇಲಾಗುತ್ತಿದೆ ಎಂದರು.

ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ರೈತಪರ ಯೋಜನೆಗಳನ್ನು ರದ್ದುಗೊಳಿಸುವುದು ಅನ್ನದಾತನಿಗೆ ಮಾಡುವ ದ್ರೋಹ. ರೈತ ಕುಟುಂಬಗಳಿಗೆ ಭದ್ರತೆ ಒದಗಿಸುವ ಜೀವನ ಜ್ಯೋತಿ ವಿಮಾ ರದ್ದತಿ, ರಾಜ್ಯದ 1 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ ರೈತರಿಗೆ ಭೂ ಸಿರಿ ಎಂಬ ಯೋಜನೆಯಲ್ಲಿ 10 ಸಾವಿರ ಹೆಚ್ಚುವರಿ ಸಹಾಯಧನ ನೀಡುವ ಬಿಜೆಪಿ ಸರ್ಕಾರದ ನಿರ್ಧಾರ ರದ್ಧತಿ, ಕೇಂದ್ರ ಸರ್ಕಾರದ ಜೊತೆ ಬಿಜೆಪಿ ಸಹ ಸಹಾಯ ಧನ ಒದಗಿಸುವ ಕಿಸಾನ್ ಸಮ್ಮಾನ್ ಯೋಜನೆಗೆ ತನ್ನ ಪಾಲಿನ ಹಣ ಬಿಡುಗಡೆ ಮಾಡಲು ಹಿಂದೇಟು, ನೀರಾವರಿ ಯೋಜನೆಗಳ ನಿರ್ಲಕ್ಷ್ಯ, ಕ್ಷೀರ ಸಮುದ್ರ ಸಹಕಾರ ಬ್ಯಾಂಕ್ ರದ್ಧತಿ ಹೀಗೆ ರೈತರ ಪರವಾದ ಯೋಜನೆಗಳ ರದ್ಧತಿ ಪಟ್ಟಿ ದೊಡ್ಡದಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ವಿಜುಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ, ಡಾ.ಸುರೇಶ ಬಿರಾದಾರ, ಮಲ್ಲಿಕಾರ್ಜುನ ಜೋಗೂರ, ಶಿವರುದ್ರ ಬಾಗಲಕೋಟ, ಉಮೇಶ ಕೋಳಕೂರ, ವಿವೇಕಾನಂದ ಡಬ್ಬಿ, ಭೀಮಾಶಂಕರ ಹದನೂರ, ರಾಹುಲ್ ಜಾಧವ, ಮಳುಗೌಡ ಪಾಟೀಲ, ಬಸವರಾಜ ಬಿರಾದಾರ, ಸಂಜೀವ ಐಹೊಳೆ, ಸಿದ್ದು ಬುಳ್ಳಾ, ವಿಠ್ಠಲ ಕಿರಸೂರ, ಸಂಪತ್ ಕುವಳ್ಳಿ, ವಿನೋದ ಡೋಮನಾಳ, ರಾಜೇಶ ತಾವಸೆ, ಅಬ್ದುಲ್ ಸತ್ತಾರ ಕೊಲ್ಹಾರ, ಕಾಂತು ಶಿಂಧೆ, ವಿನಾಯಕ ದಹಿಂಡೆ, ಶಿವು ಮಡಿವಾಳರ, ರಾಮು ಚವ್ಹಾಣ, ಆನಂದ ಮುಚ್ಚಂಡಿ, ಜಗದೀಶ ಮುಚ್ಚಂಡಿ, ವಿಜಯ ಜೋಶಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net