

ಹುಬ್ಬಳ್ಳಿ : ಮಹಾತ್ಮ ಗಾಂಧಿ ನಗರೋತ್ಥಾನ ಯೋಜನೆ (ಎಂಜಿಎನ್ವೈ) 2ನೇ ಹಂತದ 200 ಕೋಟಿ ರೂ.ಗಳ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯನ್ನು ನೇರವಾಗಿ ಪೌರಾಡಳಿತ ನಿರ್ದೇಶನಾಲಯ (ಡಿಎಂಎ) ಕರೆಯುವ ಮೂಲಕ ಮಹಾನಗರ ಪಾಲಿಕೆಗಳ ಹಕ್ಕುಚ್ಯುತಿಯಾದಂತಾಗಿದೆ ಎಂದು ಹು-ಧಾ ಮಹಾನಗರ ಪಾಲಿಕೆ ಸಭಾನಾಯಕ ವೀರಣ್ಣ ಸವಡಿ ಹಾಗೂ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಆರೋಪಿಸಿದ್ದಾರೆ.
ಎಂಜಿಎನ್ವೈ ಟೆಂಡರ್ ಪ್ರಕ್ರಿಯೆಯಲ್ಲಿ ಡಿಎಂಎ ಹಸ್ತಕ್ಷೇಪ ವಿರೋಧಿಸಿ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಾಲಿಕೆ ಬಿಜೆಪಿ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಇಲ್ಲಿನ ಮಿನಿ ವಿಧಾನಸೌಧದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವೀರಣ್ಣ ಸವಡಿ ಹಾಗೂ ತಿಪ್ಪಣ್ಣ ಮಜ್ಜಗಿ, ಎಂಜಿಎನ್ವೈ ಯೋಜನೆ ಮೊದಲ ಹಂತದ ಟೆಂಡರ್ ಅನ್ನು ಯಾವುದೇ ಲೋಪವಿಲ್ಲದೇ ಮಹಾನಗರ ಪಾಲಿಕೆಯೇ ನಿರ್ವಹಿಸಿದೆ. ಆದರೆ, 2ನೇ ಹಂತದ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ಡಿಎಂಎ ಕೈ ಹಾಕಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಂಜಿಎನ್ವೈ 2ನೇ ಹಂತದ ಟೆಂಡರ್ ಪ್ರಕ್ರಿಯೆಯನ್ನು ಸಹ ಪಾಲಿಕೆಯೇ ನಿರ್ವಹಿಸಬೇಕೆಂದು ನ. 30ರಂದು ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾಯಿಸಲಾಗಿದೆ. ಠರಾವು ಪತ್ರವನ್ನು ಸರ್ಕಾರಕ್ಕೂ ಕಳುಹಿಸಲಾಗಿದೆ. ವಿಧಾನಸಭೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಹ ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.
ಇದರೊಂದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾದರಿಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿಯೂ ಆಸ್ತಿಕರ ಒಂದು ಸಾರಿ ಹೊಂದಾಣಿಕೆ (ಒಟಿಎಸ್)ಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ನೀರಿನ ಕರ ಬಾಕಿ ವಸೂಲಿಗೆ ಒಂದು ಬಾರಿ ಒಟಿಎಸ್ಗೆ ಅವಕಾಶ ನೀಡಿತ್ತು. ಮತ್ತೊಂದು ಬಾರಿ ಒಟಿಎಸ್ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.
ಪಾಲಿಕೆ ನೌಕರರ ಬಾಕಿ ಪಿಂಚಣಿ 58 ಕೋಟಿ ರೂ. ಹಾಗೂ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಬಾಕಿ 48 ಕೋಟಿ ರೂ. ಬಿಡುಗಡೆಗೊಳಿಸಬೇಕು. ಹೊಸ ಸಭಾಭವನ ನಿರ್ವಣಕ್ಕೆ 30 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಪಾಲಿಕೆ ಸದಸ್ಯರ ಗೌರವಧನ ಹೆಚ್ಚಿಸಬೇಕು. ಲೀಸ್ ಆಸ್ತಿಗಳ ಮಾರಾಟ ಹಾಗೂ ಮುಂದುರಿಸುವ ಬಗ್ಗೆ ಪಾಲಿಕೆಯ ಠರಾವು ಸರ್ಕಾರದ ಮಟ್ಟದಲ್ಲಿ ಬಾಕಿ ಇದ್ದು, ಶೀಘ್ರ ನಿರ್ಣಯ ಕೈಗೊಳ್ಳಬೇಕು. ಪಾಲಿಕೆಯ 1, 2 ಮತ್ತು 3ನೇ ಹಂತದ 100 ಕೋಟಿ ರೂ.ಗಳಲ್ಲಿ ಬಾಕಿ 54 ಕೋಟಿ ರೂ. ಇದುವರೆಗೆ ಬಿಡುಗಡೆಗೊಂಡಿಲ್ಲ. ಪಾಲಿಕೆಗೆ ಸರ್ಕಾರದಿಂದ ಬರಬೇಕಿರುವ ಒಟ್ಟು 300 ಕೋಟಿ ರೂ.ಗಳನ್ನು ಶೀಘ್ರ ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಈರೇಶ ಅಂಚಟಗೇರಿ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ಶಿವು ಹಿರೇಮಠ, ವಿಜಯಾನಂದ ಶೆಟ್ಟಿ, ರಾಧಾಬಾಯಿ ಸಫಾರೆ, ಉಮಾ ಮುಕುಂದ, ಉಮೇಶ ಕೌಜಗೇರಿ, ಚಂದ್ರಶೇಖರ ಮನಗುಂಡಿ, ರೂಪಾ ಶೆಟ್ಟಿ, ಸೀಮಾ ಮೊಗಲಿಶೆಟ್ಟರ, ಶಿವು ಮೆಣಸಿನಕಾಯಿ, ಪ್ರಮುಖರಾದ ದತ್ತಮೂರ್ತಿ ಕುಲಕರ್ಣಿ, ಸಿದ್ದು ಮೊಗಲಿಶೆಟ್ಟರ, ಈಶ್ವರಗೌಡ ಪಾಟೀಲ, ಸಂಜಯ ಕಪಟಕರ, ಮಹೇಂದ್ರ ಕೌತಾಳ, ರವಿ ನಾಯಕ, ರಾಜು ಕೋರ್ಯಾನಮಠ, ಪ್ರಭು ನವಲಗುಂದಮಠ ಹಾಗೂ ಇತರರು ಪಾಲ್ಗೊಂಡಿದ್ದರು.
ಧರಣಿ ಎಚ್ಚರಿಕೆ: ಎಲ್ಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಸುವರ್ಣ ಸೌಧದಲ್ಲಿ ಸರ್ವಪಕ್ಷ ನಿಯೋಗದೊಂದಿಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಲಾಗುವುದು. ಮುಖ್ಯಮಂತ್ರಿ ಅವರು ಭೇಟಿಗೆ ಸಮಯ ನೀಡಬೇಕು, ಇಲ್ಲದಿದ್ದರೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ನಿವಾಸದ ಎದುರು ಧರಣಿ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.