

ಬೆಳಗಾವಿ: ಉಡುಪಿ ಜಿಲ್ಲೆಯ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರ ಖಾಸಗಿ ಸ್ಥಳದಲ್ಲಿ ವಿಡಿಯೋ ಮಾಡಿ ವೈರಲ್ ಮಾಡಿದ ವಿದ್ಯಾರ್ಥಿನಿಯರ ಮೇಲೆ ಕಠಿಣ ಕ್ರಮ ಜುರುಗಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಮಹಿಳಾ ಮೋರ್ಚಾ ಮಹಾನಗರ ಜಿಲ್ಲಾ ಘಟಕದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟಿಸಲಾಯಿತು.
ಮೂವರು ವಿದ್ಯಾರ್ಥಿನಿಯರು ವಿಡಿಯೋ ಕ್ಯಾಮರಾ ಸ್ನಾನದ ಕೊಠಡಿಯಲ್ಲಿಟ್ಟು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಜು. 19ರಂದು ಈ ಘಟನೆ ನಡೆದಿದೆ. ಆ ಮೂವರು ವಿದ್ಯಾರ್ಥಿನಿಯರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ವಿಚಾರವಾಗಿ ಸಭೆ ನಡೆಸಿದ ಗೃಹ ಸಚಿವ ಡಾ. ಪರಮೇಶ್ವರ ಏನು ಕ್ರಮ ಕೈಗೊಂಡಿಲ್ಲ. ಹಿಂದು ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣದ ಬಗ್ಗೆ ಸರ್ಕಾರ ಏನು ಹೇಳುತ್ತದೆ ? ಸರ್ಕಾರದ ಕ್ರಮ ಏನು ಎಂದು ಪ್ರಶ್ನಿಸಿದರು.
ಸರ್ಕಾರ ಈ ಪ್ರಕರಣ ತನಿಖೆ ನಡೆಸಬೇಕು. ಮಾನ ಹಾನಿಗೆ ಕಾರಣರಾದ 3 ಯುವತಿಯರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.
ಬಿಜೆಪಿ ಮಹಿಳಾ ಮೋರ್ಚಾ ಘಟಕದ ರಾಜ್ಯ ಕಾರ್ಯದರ್ಶಿ ಉಜ್ವಲಾ ಬಡವನಾಚೆ, ಮಹಾನಗರ ಘಟಕದ ಅಧ್ಯಕ್ಷೆ ಸುವರ್ಣ ಪಾಟೀಲ, ದಕ್ಷಿಣ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ಸುತಾರ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.