

ಮಂಡ್ಯ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರನ್ನು ಅಮಾನುಷವಾಗಿ ನಡೆಸಿಕೊಂಡು ಸಂವಿಧಾನ ಬದ್ದ ಹಕ್ಕು ನಿರಾಕರಿಸಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಭೀಮಸೇನೆ ಕರ್ನಾಟಕ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಮೆರವಣಿಗೆ ಹೊರಟ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಪರಿಶಿಷ್ಟ ಸಮುದಾಯದ ಜನರನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಿರುವವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲು ಮಾಡುವಂತೆ ಒತ್ತಾಯಿಸಿದರು.
ಕಬ್ಬನಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜನತೆಗೆ ನಿವೇಶನ ದೊರಕಿಸಿಕೊಡಲು ಗರೀಬಿ ಸೈಟಿಗಾಗಿ ಮೀಸಲಿರಿಸಿದ್ದ 7 ಎಕರೆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದು, ಜಿಲ್ಲಾಡಳಿತ ಈ ಕೂಡಲೇ ಒತ್ತುವರಿ ತೆರವುಗೊಳಿಸಿ ವಶಕ್ಕೆ ಪಡೆಯಬೇಕು. ಮಾತ್ರವಲ್ಲದೆ ಸಾರ್ವಜನಿಕ ಸ್ಮಶಾನ ದೊರಕಿಸಿಕೊಡಬೇಕು. ಜಯಪುರ ಗ್ರಾಮದಲ್ಲಿ ಪರಿಶಿಷ್ಟರು ಓಡಾಡುತ್ತಿದ್ದ ರಸ್ತೆಗೆ ತಡೆಗೋಡೆ ನಿರ್ಮಿಸುವವರ ವಿರುದ್ಧ ಕಾನೂನು ಕ್ರಮ ವಹಿಸಬೇಕು. ಸೀತಾಪುರ ಗ್ರಾಮದಲ್ಲಿ ವಾಸಿಸುತ್ತಿರುವ ವಾಲ್ಮೀಕಿ ಸಮುದಾಯದ ಜನತೆಗೆ ಪರಿಶಿಷ್ಟ ವರ್ಗದ ಜಾತಿ ಪ್ರಮಾಣ ಪತ್ರ ನೀಡದೆ ವಂಚನೆ ಮಾಡಿರುವ ತಾಲೂಕು ಆಡಳಿತ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಪರಿಶಿಷ್ಟರು ವಾಸಿಸುವ ಗ್ರಾಮದಲ್ಲಿ ಸ್ಮಶಾನ ಕಾಯ್ದಿರಿಸುವಂತೆ ತಾಲೂಕು ಆಡಳಿತಕ್ಕೆ ನಿರ್ದೇಶನ ನೀಡಬೇಕು. ಪರಿಶಿಷ್ಟ ಪಂಗಡ ಸಮುದಾಯದ ಜನರ ಸಮಸ್ಯೆ ನಿವಾರಣೆಗೆ ಸಮುದಾಯದ ಮುಖಂಡರ ಸಭೆ ಕರೆದು ಚರ್ಚಿಸಿ ಪರಿಹಾರ ರೂಪಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸೇನೆಯ ರಾಜ್ಯಾಧ್ಯಕ್ಷ ಜೆ.ಪ್ರಸನ್ನ, ಕೆ.ಎಚ್.ಲವ, ಸುಂದರಿ, ಕೆ.ಸಿ.ಸುನೀಲ್, ಕೆ.ಪಿ.ಮಹೇಶ್, ಕುಳ್ಳ ನಿಂಗಯ್ಯ, ಕೆ.ಎಸ್.ಪ್ರವೀಣ್ ಇತರರಿದ್ದರು.