

ಮಡಿಕೇರಿ: ಹೊಸೂರು ನ್ಯಾಯಾಲಯದ ವಕೀಲರ ಹತ್ಯೆ ಖಂಡಿಸಿ ಮಡಿಕೇರಿ ವಕೀಲರ ಸಂಘದಿಂದ ಪ್ರತಿಭಟನೆ ನಡೆಸಿ ಇಂತಹ ಪ್ರಕರಣಗಳು ಮರುಕಳಿಸದ ನಿಟ್ಟಿನಲ್ಲಿ ವಕೀಲ ವೃಂಧಕ್ಕೆ ಸೂಕ್ತ ರೀತಿಯ ಕಾನೂನು ರಕ್ಷಣೆ ನೀಡುವಂತೆ ಆಗ್ರಹಿಸಲಾಯಿತು.
ನಗರದ ನ್ಯಾಯಾಲಯ ಸಂಕೀರ್ಣದ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದ ವಕೀಲರನ್ನುದ್ದೇಶಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್, ಎರಡು ದಿನಗಳ ಹಿಂದೆ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಹೊಸೂರು ನ್ಯಾಯಲಯದ ಆವರಣದಲ್ಲಿ ವಕೀಲ ಕಣ್ಣನ್ ಅವರನ್ನು ಬರ್ಭರವಾಗಿ ಕೊಲೆ ಮಾಡಲಾಗಿದೆ. ಇಂದಿನ ದಿನಗಳಲ್ಲಿ ನ್ಯಾಯಾಲಯದ ಅಧಿಕಾರಿಗಳಾಗಿರುವ ವಕೀಲರು ಭಯದ ವಾತವರಣದಲ್ಲಿ ಕೆಲಸ ನಿರ್ವಹಿಸುವಂತ್ತಾಗಿದೆ. ವಕೀಲರಿಗೆ ಸೂಕ್ತ ರಕ್ಷಣೆಯ ಕೊರತೆಯಿಂದಾಗಿ ಇಂತಹ ಘಟನೆಗಳು ಮರುಕಳುಹಿಸುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವವರು ವಕೀಲರುಗಳಿಗೆ ಸೂಕ್ತ ರಕ್ಷಣೆ ನೀಡುವಂತಾಗಬೇಕು. ಕೃತ್ಯ ಎಸಗಿದ ಅಪರಾಧಿಗೆ ಶೀಘ್ರ ನ್ಯಾಯಾಂಗ ವಿಚಾರಣೆಯಾಗಿ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಡಿಕೇರಿ ವಕೀಲರ ಸಂಘದ ಕಾರ್ಯದರ್ಶಿ ಡಿ.ಎಂ.ಕೇಶವ, ಉಪಾಧ್ಯಕ್ಷ ಎಂ.ಪಿ.ನಾಗರಾಜ್, ಜಂಟಿ ಕಾರ್ಯದರ್ಶಿ ಪವನ್ ಪೆಮ್ಮಯ್ಯ, ಖಜಾಂಜಿ ಜಿ.ಆರ್.ರವಿಶಂಕರ್ ಸೇರಿದಂತೆ ವಕೀಲ ವಂಧದವರು ಹಾಜರಿದ್ದರು.