

ಮಂಡ್ಯ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಸಚಿವ ಅಮಿತ್ ಷಾ ಅವರು ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಹಾಗೂ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು, ಅಮಿತ್ ಷಾ ವಿರುದ್ಧ ಘೋಷಣೆ ಕೂಗಿದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಸಂವಿಧಾನ ಬದಲಾಯಿಸುವ, ತಿದ್ದುಪಡಿಗಳ ಮೂಲಕ ಮೂಲ ಆಶಯಗಳನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ. ವಿಶೇಷವಾಗಿ ಕೃಷಿಕರು, ಮಹಿಳೆಯರು, ದಲಿತರು, ಹಿಂದುಳಿದವರು ಸೇರಿದಂತೆ ಅಸಹಾಯಕ ಸಮುದಾಯಗಳನ್ನು ಉದಾಸೀನವಾಗಿ ಕಾಣುತ್ತಾ ಅವರನ್ನು ಶೋಷಿಸುತ್ತಲೇ ಇದ್ದಾರೆ. ಬಹುಜನರ ರಕ್ಷಾಕವಚವಾಗಿರುವ ಸಂವಿಧಾನ ಕುರಿತು ಅಸಹನೆಯನ್ನು ಹೊಂದಿರುವ ಕೆಲ ಮನುಸ್ಮತಿ ಪ್ರಭಾವಿತ ಬಿಜೆಪಿಗರು ಅಂಬೇಡ್ಕರ್ ಮತ್ತು ಸಂವಿಧಾನ ಕುರಿತು ಹಗುರವಾಗಿ ಕೆಲವೊಮ್ಮೆ ಆಕ್ರೋಶಭರಿತವಾಗಿ ಮಾತನಾಡಿಕೊಂಡು ಬಂದಿದ್ದಾರೆ. ಈಗ ಅದೇ ಪರಂಪರೆಯನ್ನು ಕೇಂದ್ರ ಗೃಹ ಸಚಿವರು ಮುಂದುವರಿಸಿದ್ದು - ಈ ಬಗ್ಗೆ ಪ್ರಧಾನಮಂತ್ರಿ ಮೌನ ಅಮಿತ್ ಷಾ ಅವರ ಹೇಳಿಕೆಯನ್ನು ಸಮ್ಮತಿಸಿರುವುದು ರಾಷ್ಟ್ರೀಯ ದುರಂತವೇ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಯ ಎಲ್.ಸಂದೇಶ್, ಎಂ.ಕೃಷ್ಣ, ಹಲ್ಲೆಗೆರೆ ಬೋರಪ್ಪ, ಬಸವರಾಜು, ಅಮ್ಜದ್‌ಪಾಷ, ನಾಗರತ್ನ, ಶಶಿಕುಮಾರ್, ರಾಜಣ್ಣ, ಎಚ್.ಡಿ. ಜಯರಾಂ, ಮಂಚಶೆಟ್ಟಿ, ಡಿ.ರಮೇಶ್, ಸಿ.ಸಿದ್ದಶೆಟ್ಟಿ, ಗುರುಶಂಕರ್, ಪ್ರದೀಪ್, ವೈರಮುಡಿ, ಜಯರಾಂ ಇತರರಿದ್ದರು.