ವಿಧಾನಸಭೆ ಸಚಿವಾಲಯ ನೌಕರರ ಸಂಘದಿಂದ ಪ್ರತಿಭಟನೆ

Vidhanasoudha
Published on

ಬೆಂಗಳೂರು: ವಿಧಾನಸಭೆ ಸಚಿವಾಲಯದಲ್ಲಿ ಕಾರ್ಯದರ್ಶಿ-2 ಹುದ್ದೆಗೆ ಸೇವಾ ಜ್ಯೇಷ್ಠತೆ ಪಾಲನೆಗೆ ಮಾಡಬೇಕು ಎಂದು ಒತ್ತಾಯಿಸಿ ಸಚಿವಾಲಯ ನೌಕರರ ಸಂಘ ಪ್ರತಿಭಟನೆ ನಡೆಸಿತು.

ಗಣಕ ವಿಭಾಗದ ಅಧಿಕಾರಿಯನ್ನು ಮುಖ್ಯ ವಾಹಿನಿಗೆ ಪರಿಗಣಿಸಬಾರದು. ವಿವಿಧ ವಿಭಾಗಗಳ ವೃಂದಗಳಲ್ಲಿಯೇ ಹುದ್ದೆಗಳನ್ನು ಸೃಜಿಸಿ ಮುಂಬಡ್ತಿ ನೀಡಬೇಕು. ಗ್ರೂಪ್ ಡಿ ಹುದ್ದೆಯಿಂದ ಕಿರಿಯ ಸಹಾಯಕರ ಹುದ್ದೆಗೆ ವಿಳಂಬ ಮಾಡದೇ ಕಾಲ ಕಾಲಕ್ಕೆ ಮುಂಬಡ್ತಿ ನೀಡಬೇಕು, ಆರೋಗ್ಯ ಭಾಗ್ಯ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಬೇಕು ಎಂದು ಸಂಘ ಆಗ್ರಹಿಸಿತು.

ವಿಧಾನಸೌಧದ ಆವರಣದಲ್ಲಿರುವ ನಂದಿನಿ ಮಿಲ್ಕ್ ಪಾರ್ಲರ್ ಮುಂಭಾಗದ ಪ್ರತಿಭಟನೆ ನಡೆಸಿದ ನೌಕರರು ಗಣಕ ವಿಭಾಗದ ನಿರ್ದೇಶಕ ಶಶಿಧರ್ ಅವರನ್ನು ಆ ಸ್ಥಾನಕ್ಕೆ ತರಲು ಹೆಚ್ಚಿರುವ ಒತ್ತಡಕ್ಕೆ ವಿರೋಧ ವ್ಯಕ್ತಪಡಿಸಿದರು.

ಜಂಟಿ ಕಾರ್ಯದರ್ಶಿ ವೃಂದದಲ್ಲಿ ಹಿರಿಯರಾದ ಸಿ.ಬಿ.ಕೆಂಪಮ್ಮ ಅವರನ್ನು ಕಾರ್ಯದರ್ಶಿ-2 ಹುದ್ದೆಗೆ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಎನ್.ಜೆ.ಮೋಹನ್, ಪ್ರಧಾನ ಕಾರ್ಯದರ್ಶಿ ದೇವರಾಜ್, ಗೌರವಾಧ್ಯಕ್ಷ ವಿ.ಚಂದ್ರಶೇಖರ್, ನಿರ್ದೇಶಕ ಪುನೀತ್ ಸೇರಿದಂತೆ ನೂರಾರು ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net