

ಮೈಸೂರು: ಮಾಸಿಕ 12 ಸಾವಿರ ರೂ. ಗೌರವಧನ, ಅಗತ್ಯವಿರುವಷ್ಟು ಆರೋಗ್ಯ ರಕ್ಷಣಾ ಸಾಮಗ್ರಿ ನೀಡುವುದು ಸೇರಿ ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಆಶಾ ಕಾರ್ಯಕರ್ತೆಯರು ಪ್ರಾಣ ಲೆಕ್ಕಿಸದೆ ಕೋವಿಡ್ ಕೆಲಸ ನಿರ್ವಹಿಸಿದ್ದರೂ ಸೂಕ್ತ ಆರೋಗ್ಯ ರಕ್ಷಣೆ ಇಲ್ಲವಾಗಿದೆ. ಸರ್ಕಾರ ತಿಂಗಳಿಗೆ ಕೇವಲ ಒಂದು ಮಾಸ್ಕ್ ಹಾಗೂ ಗ್ಲೌಸ್ ನೀಡಿದ್ದು ರಕ್ಷಣಾ ಪರಿಕರ ನೀಡಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಪ್ರಸ್ತುತ ಮಾಸಿಕ 4 ಸಾವಿರ ರೂ. ಗೌರವಧನ ನೀಡಲಾಗುತ್ತಿದ್ದು, ಪ್ರೋತ್ಸಾಹಧನ ನೀಡುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ. ಈ ಕೂಡಲೇ ಸರ್ಕಾರ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಬೇಕು, ಸಾಕಷ್ಟು ಪ್ರಮಾಣದಲ್ಲಿ ರಕ್ಷಣಾ ವಸ್ತು ನೀಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಬೇಡಿಕೆ ಈಡೇರದಿದ್ದಲ್ಲಿ ಜುಲೈ 27 ರಂದು ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ಆಶಾ ಕಾರ್ಯಕರ್ತೆಯರ ಸಂಘದ ಭಾಗ್ಯಾ, ಸುನೀತಾ, ಕೋಮಲಾ ಇತರರು ಇದ್ದರು.