ಮಂಡ್ಯ ಮೀನುಗಾರಿಕೆ ಗುತ್ತಿಗೆ ಮೈಸೂರಿಗೆ: ಅರೆಕೆರೆ ಮೀನುಗಾರರಿಂದ ಪ್ರತಿಭಟನೆ

1 (3)
Published on

ಮಂಡ್ಯ: ಶ್ರೀರಂಗಪಟ್ಟಣ ತಾಲೂಕು ಅರಕೆರೆ ಗ್ರಾಮದ ದೊಡ್ಡಕೆರೆಯ ಮೀನುಗಾರಿಕೆ ಗುತ್ತಿಗೆಯನ್ನು ಸ್ಥಳೀಯರಿಗೆ ನೀಡದೆ ಹೊರ ಜಿಲ್ಲೆಯವರಿಗೆ ನೀಡಿರುವ ಕ್ರಮ ವಿರೋಧಿಸಿ ಅರಕೆರೆ ಮೀನುಗಾರರ ಸಹಕಾರ ಸಂಘದ ಸದಸ್ಯರು ಮೀನುಗಾರಿಕೆ ಇಲಾಖೆ ಎದುರು ಪ್ರತಿಭಟಿಸಿ ಜಿಲ್ಲಾ ನಿರ್ದೇಶಕ ಬಾಬಾ ಸಾಹೇಬ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ವೃತ್ತಿಪರ ಮೀನುಗಾರರು ಸದಸ್ಯರಾಗಿರುವ ಸಂಘಕ್ಕೆ ಗುತ್ತಿಗೆ ನೀಡದೆ ಮೈಸೂರಿನ ಒಳನಾಡು ಮೀನುಗಾರರ ಅಭಿವೃದ್ಧಿ ಸಂಘಕ್ಕೆ ಗುತ್ತಿಗೆ ನೀಡಲಾಗಿದೆ. ಕಳೆದ ದಶಕದಿಂದ ಗುತ್ತಿಗೆ ಮಾಡುತ್ತಿದ್ದ ಮೀನುಗಾರರನ್ನು ಕಡೆಗಣಿಸಿದ್ದಾರೆ. ಸಹಕಾರ ಇಲಾಖೆಯ ನಿಯಮಾವಳಿಯಂತೆ ಅರಕೆರೆ ಮೀನುಗಾರರ ಸಹಕಾರ ಸಂಘ ನಡೆದುಕೊಂಡು ಬರುತ್ತಿದೆ. ಆದರೆ ಶಾಸಕ ರಮೇಶ ಬಂಡಿಸಿದ್ದೇಗೌಡ ಇಲಾಖೆಗೆ ಪತ್ರ ಬರೆದು ಅರಕೆರೆ ಮೀನುಗಾರರ ಸಹಕಾರ ಸಂಘದವರು ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳಿಯಿಂದ 20 ವರ್ಷದಿಂದ 9 ಲಕ್ಷ ರೂ ಸಾಲ ಪಡೆದುಕೊಂಡು ನಗದು ಪುಸ್ತಕದಲ್ಲಿ ನಮೂದಿಸದೆ, ಸಂಘ ಲಾಭದಾಯಕವಾಗಿದೆ ಎಂದು ಸುಳ್ಳು ಲೆಕ್ಕಪತ್ರ ಬರೆದುಕೊಂಡಿದ್ದಾರೆ. ಮೀನುಗಾರಿಕೆ ಇಲಾಖೆಯಿಂದ ಅರಕೆರೆ ಕೆರೆಯನ್ನು ಪಡೆದುಕೊಂಡಿರುವುದರಿಂದ ಸಂಘದ ಕಳೆದ ಹತ್ತು ವರ್ಷಗಳ ಲೆಕ್ಕ ಪತ್ರಗಳನ್ನು ತಪಾಸಣೆ ಮಾಡಿಸುವಂತೆ ಕೋರಿದ್ದಾರೆ ಎಂದಿದ್ದಾರೆ.

ಅದರಂತೆ ಸದರಿ ಸಂಘಕ್ಕೆ ಯಾವುದೇ ಸೌಲಭ್ಯಗಳನ್ನು ನೀಡದಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ನಿಬರ್ಂಧ ಹಾಕಿದ್ದಾರೆ. ಸಹಕಾರ ಸಂಘದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಬಂದಿರುವ ಸ್ಥಳೀಯ ಸಂಘವನ್ನು ಬಿಟ್ಟು ವೃತ್ತಿಪರ ಮೀನುಗಾರರಲ್ಲದ ಸದಸ್ಯರನ್ನು ಹೊಂದಿರುವ ಸಂಘಕ್ಕೆ ಗುತ್ತಿಗೆ ನೀಡುವ ಮೂಲಕ ಗಂಗಾಮತಸ್ಥ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ಹೊರ ಜಿಲ್ಲೆಯ ಸಂಘಕ್ಕೆ ಗುತ್ತಿಗೆ ನೀಡಿರುವುದನ್ನು ರದ್ದುಪಡಿಸಿ ಸ್ಥಳೀಯ ಮೀನುಗಾರರಿಗೆ ಅನುಕೂಲವಾಗುವಂತೆ ಸ್ಥಳೀಯ ಸಂಘಕ್ಕೆ ಗುತ್ತಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಚಿಕ್ಕಣ್ಣ, ಜಿ.ಎಸ್.ಸಿದ್ದಯ್ಯ, ಈರಯ್ಯ, ಉಮೇಶ್ ಹಾಡ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net