

ಬ್ಯಾಡಗಿ: ಕೆಎಂಎಫ್ ಮೆಗಾಡೇರಿ ನಿರ್ವಣಕ್ಕೆ ಗ್ರಾಮ ಪಂಚಾಯಿತಿ ಠರಾವು ಮಾಡಿದಷ್ಟು ಭೂಮಿಯನ್ನು ಮಾತ್ರ ಪಡೆಯಬೇಕು. ಸುತ್ತಲಿನ ನಿವಾಸಿಗಳಿಗೆ ಉಂಟಾಗುವ ದುರ್ವಾಸನೆ ತಪ್ಪಿಸುವುದು, ಸ್ಥಳೀಯರಿಗೆ ಘಟಕದಲ್ಲಿ ಉದ್ಯೋಗಕ್ಕೆ ಅವಕಾಶ ಕಲ್ಪಿಸುವುದು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅರಬಗೊಂಡ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಮುಖಂಡ ಪರಶುರಾಮ ಚನ್ನಗಿರಿ ಮಾತನಾಡಿ, ಸಾಕಷ್ಟು ಹೋರಾಟಗಳಿಂದ ಜಿಲ್ಲೆಗೆ ಮೆಗಾಡೇರಿ ಘಟಕ ನಿರ್ವಿುಸಲು ಭೂಮಿಪೂಜೆ ನೆರವೇರಿಸಿ, ಈಗ ಕಟ್ಟಡ ಕಾಮಗಾರಿ ನಡೆದಿದೆ. ಇದರಿಂದ ರೈತಕುಲಕ್ಕೆ ಉತ್ತಮ ಆದಾಯ ನೀಡಿದಂತಾಗಿದೆ. ಆದರೆ, ಸ್ಥಳೀಯ ಗ್ರಾಮದ ಸುಮಾರು 25 ಎಕರೆ ಭೂಮಿಯನ್ನು ಪಡೆದುಕೊಳ್ಳಲು ಗ್ರಾ.ಪಂ. ಠರಾವು ಮಾಡಿಕೊಟ್ಟಿದೆ. ಆದರೆ, 30 ಎಕರೆ ಜಮೀನಿಗೆ ಪಹಣಿ ಪತ್ರ ಲಭ್ಯವಾಗಿದೆ. ಹಾಗಾದರೆ, ಅಧಿಕಾರಿಗಳು ಇದರಲ್ಲಿ ಶಾಮೀಲಾಗಿ, 5 ಎಕರೆ ಜಮೀನಿನ ಅನಧಿಕೃತ ದಾಖಲೆ ಸೃಷ್ಟಿಸಿದ್ದಾರೆಯೇ ಎಂದು ಆರೋಪಿಸಿದರು.
ಘಟಕದ ಕೊಳಚೆ ನೀರನ್ನು ಇಲ್ಲಿನ ಕೆರೆಗೆ ಬಿಡುತ್ತಿದ್ದು, ಬರುವ ದಿನಗಳಲ್ಲಿ ಸುತ್ತಲಿನ ನಿವಾಸಿಗಳಿಗೆ ದುರ್ವಾಸನೆ ಹೆಚ್ಚಲಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದು ಒತ್ತಾಯಿಸಿದರು.
ಮೆಗಾಡೇರಿ ಗ್ರಾಮಕ್ಕೆ ಹೊಂದಿಕೊಂಡು ಆರಂಭವಾಗುತ್ತಿದ್ದು, ಘಟಕದಲ್ಲಿ ಗ್ರಾಮದ ಯುವಕರಿಗೆ ಆದ್ಯತೆ ನೀಡಬೇಕು. ಆದರೆ, ಕೆಎಂಎಂ ಅಧಿಕಾರಿಗಳು ಸ್ಥಳೀಯರು ಮಾಹಿತಿ ಕೇಳಿದರೆ, ನೇಮಕಾತಿ ಕುರಿತು ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತಿಲ್ಲ. ಕೂಡಲೇ ಗ್ರಾಮಸ್ಥರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಧಾರವಾಡ ಕೆಎಂಎಫ್ ಅಧ್ಯಕ್ಷ ಬಸವರಾಜ ಅರಬಗೊಂಡ, ನಾನು ಕೂಡ ನಿಮ್ಮ ಗ್ರಾಮದವನು, ನನಗೂ ಇಲ್ಲಿನ ನೈಜ ಪರಿಸ್ಥಿತಿಯ ಅರಿವಿದೆ. ಗ್ರಾಮಸ್ಥರಿಗೆ ವಿರುದ್ಧವಾಗಿ ಯಾವುದೂ ನಡೆಯುವುದಿಲ್ಲ. ನೀವು ಸಹಕಾರ ಕೊಡಬೇಕು. ಜಿಲ್ಲೆಯ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಧಾರವಾಡದಿಂದ ಇಲ್ಲಿ ಹೊಸ ಘಟಕ ಆರಂಭಿಸಲಾಗುತ್ತಿದೆ. ಸ್ಥಳೀಯ ಯುವಕರನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳಲು ಆದ್ಯತೆ ನೀಡಲಾಗುವುದು. ಗ್ರಾಮ ಪಂಚಾಯಿತಿಯಲ್ಲಿ ಠರಾವು ಮಾಡಿದಂತೆ ಭೂಮಿ ಪಡೆಯಲಾಗಿದೆ. ದಾಖಲಾತಿಯಲ್ಲಿ ಸಮಸ್ಯೆ, ದೋಷ ಕಂಡುಬಂದಲ್ಲಿ ಕೆಲ ಸಮಯ ಕೊಡಿ, ಇತ್ಯರ್ಥಗೊಳಿಸಲಾಗುವುದು ಎಂದು ಭರವಸೆ ನೀಡಿದರು ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಕೆಎಂಎಫ್ ಎಂಡಿ ದೇವಪ್ಪ ಕಳಸದ, ಪಿಎಸ್ಐ ಮಂಜುನಾಥ ಕುಪ್ಪೇಲೂರು, ಸಿಪಿಐ ಮಹಾಂತೇಶ ಲಂಬಿ, ಪರಶುರಾಮ ಚನ್ನಗಿರಿ, ಸಂತೋಷ ಕಿಳ್ಳಿ, ಮಾಲತೇಶ ಬಾಲೆಹೊಸೂರು, ಶಿವರಾಜ ಬಣಕಾರ ಇದ್ದರು.