

ವಿಜಯಪುರ : ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ನೌಕರರ ಸಂಘ ಹಾಗೂ ಕಾರ್ಯಕರ್ತೆಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಅಂಗನವಾಡಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಸುನಂದಾ ಮಾತನಾಡಿ, ಭಾರತದಲ್ಲಿ ಹಸಿವಿನ ಸೂಚ್ಯಾಂಕ ಹೆಚ್ಚಾಗಿದ್ದು, ಮಕ್ಕಳು ಹಾಗೂ ತಾಯಂದಿರಲ್ಲಿ ಅಪೌಷ್ಠಿಕತೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಅನುದಾನ ಹೆಚ್ಚಳಮಾಡುವ ಬದಲಿಗೆ ಐಸಿಡಿಎಸ್ ಬಗ್ಗೆ ನಿರ್ಲಕ್ಷೃ ತಾಳದೆ ಮತ್ತೊಂದು ಕಡೆ ಅಂಗನವಾಡಿ ನೌಕರರಿಗೆ ನೀಡುವ ಗೌರವಧನವನ್ನು ಪ್ರತಿ ತಿಂಗಳು ನೀಡದೆ ಮೂರು ತಿಂಗಳಿಗೊಮ್ಮೆ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಅಭಿವೃದ್ಧಿಗೆ ಕಾರಣಕರ್ತರಾಗಿ, ಕರೊನಾ ಸಂದರ್ಭದಲ್ಲಿ ತಮ್ಮ ಜೀವನಗಳನ್ನೇ ಮುಡುಪಾಗಿಟ್ಟು ದೇಶದ ಗೌರವವನ್ನು ಹೆಚ್ಚಿಸಿದ್ದಾರೆ. ಇಂತಹ ಅಂಗನವಾಡಿ ಮಹಿಳೆಯರ ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ತಮ್ಮ ಜೀವನ ಕಷ್ಟದಲ್ಲಿ ನಡೆಸಬೇಕಾಗಿದೆ. ಇಂದಿಗೂ ಕೇಂದ್ರ ಸರ್ಕಾರ ಕೇವಲ 4500 ರೂ. ಮಾತ್ರ ಕೊಡುತ್ತದೆ. ಉಳಿದ ವೇತನವನ್ನು ರಾಜ್ಯ ಸರ್ಕಾರದ ಬಳಿ ನಿರಂತರ ಹೋರಾಟದಿಂದ ತೆಗೆದುಕೊಳ್ಳಲು ಸಾಧ್ಯವಾಗಿದೆ. 26 ಸಾವಿರ ಕನಿಷ್ಟ ವೇತನ ಮತ್ತು 10 ಸಾವಿರ ನಿವೃತ್ತಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಅಂಗನವಾಡಿ ನೌಕರರ ಸಂಘ ಕಾರ್ಯದರ್ಶಿ ಶಾಂತಾ ಎನ್. ಘಂಟೆ ಮಾತನಾಡಿ, ಅಂಗನವಾಡಿ ನೌಕರರಿಗೆ ಪ್ರತಿ ತಿಂಗಳು ಗೌರವ ಧನ, ಮೊಟ್ಟೆ, ಗ್ಯಾಸ್, ಬಾಡಿಗೆ ಹಣ ಬಿಡುಗಡೆ ಮಾಡಬೇಕು. ಅಂಗನವಾಡಿ ಕೇಂದ್ರಗಳಲ್ಲೂ ಎಲ್‌ಕೆಜಿ, ಯುಕೆಜಿ ಜಾರಿ ಮಾಡಬೇಕು. ಗ್ರಾಚ್ಯುಟಿ ಆದೇಶವಾಗಿ ಜಾರಿಯಾಗಬೇಕು. ನಿವೃತ್ತಿಯಾದವರಿಗೆ ತಕ್ಷಣ ನಿವೃತ್ತಿ ಹಣ ಬಿಡುಗಡೆ ಮಾಡಬೇಕು. 2016 ರಿಂದ ಬಾಕಿ ಉಳಿದ ನಿವೃತ್ತಿ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷೆ ಸುನಂದಾ ನಾಯಕ, ಹಿರಿಯ ರೈತ ಮುಖಂಡ ಭೀಮಶಿ ಕಲಾದಗಿ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಲಕ್ಷ್ಮ್ಮಣ ಹಂದ್ರಾಳ, ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಸುರೇಖಾ ರಜಪೂತ, ರೈತ ಮುಖಂಡ ಅಣ್ಣಾರಾಯ ಈಳಗೇರ, ಅಶ್ವಿನಿ ತಳವಾರ, ಭಾರತಿ ವಾಲಿ, ಸರಸ್ವತಿ ಮಠ, ಶೋಭಾ ಕಬಾಡೆ, ಗಿರಿಜಾ ಸಕ್ರಿ, ಪ್ರತಿಭಾ ಕುರಡೆ, ಸುವರ್ಣಾ ಹಲಗಣಿ ಮತ್ತಿತರರು ಉಪಸ್ಥಿತರಿದ್ದರು.