

ಎಚ್.ಡಿ.ಕೋಟೆ: ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ಸಾಕಷ್ಟು ಹಣ ಮೀಸಲಿಡಬೇಕು, ಅಂಗನವಾಡಿಗಳನ್ನು ಬಲಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಶ್ರೀನಿವಾಸ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ತಾಲೂಕು ಘಟಕದ ಅಧ್ಯಕ್ಷೆ ನೀಲಾ ಮಾತನಾಡಿ, ಈ ದೇಶವು ಮೂರನೇ ಆರ್ಥಿಕತೆಯಾಗಲು ತೀವ್ರವಾಗಿ ಪ್ರಯತ್ನಿಸುತ್ತಿರುವಾಗ, ನಮ್ಮ ಸಮಾಜದಲ್ಲಿನ ಅಸಮಾನತೆಗಳನ್ನೂ ಕಡಿಮೆ ಮಾಡಬೇಕು. ನಾಗರಿಕರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಆದ್ಯತೆಯ ಆಧಾರದ ಮೇಲೆ ಖಾತ್ರಿಪಡಿಸಬೇಕು ಎಂದರು.
ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸಲು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ರ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಲ್ಲಿ ಅತಿ ಹೆಚ್ಚು ಅಪೌಷ್ಟಿಕತೆಯ ಸವಾಲನ್ನು ನಮ್ಮ ದೇಶವು ಗಂಭೀರವಾಗಿ ಎದುರಿಸುತ್ತಿದೆ. ದೇಶದಲ್ಲಿ ಪ್ರತಿವರ್ಷ ಸರಾಸರಿ ಆರು ವರ್ಷದೊಳಗಿನ ಸುಮಾರು 9 ಲಕ್ಷ ಮಕ್ಕಳು ಸಾಯುತ್ತಿದ್ದಾರೆ. ಇದು ನಿಲ್ಲಬೇಕು ಎಂದರು.
ಅಂಗನವಾಡಿಗಳಲ್ಲಿಯೇ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ, ಶಾಲಾಪೂರ್ವ ಶಿಕ್ಷಣ ಘಟಕಾಂಶಗಳನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ನೌಕರರಂತೆ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರನ್ನು ಕಾಯಂ ಮಾಡಬೇಕು. ತಿಂಗಳಿಗೆ ಕನಿಷ್ಠ ವೇತನ 26 ಸಾವಿರ ರೂ., ಮಾಸಿಕ ಪಿಂಚಣಿ 10 ಸಾವಿರ ರೂ., ಪಿಎಫ್, ಇಎಸ್‌ಐಗಳನ್ನು ಕೂಡಲೇ ಜಾರಿ ಮಾಡಬೇಕು ಎಂದರು.
ದೇಶಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಏಕರೂಪದ ಸೇವಾ ಷರತ್ತುಗಳನ್ನು ಜಾರಿಗೆ ತಂದು ವೇತನ ಆಯೋಗ ರಚನೆ ಮಾಡಬೇಕು. ನಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮತ್ತು ಕಾರ್ಮಿಕ ಸಂಘಟನೆ ಕಟ್ಟಿಕೊಳ್ಳುವ ಹಕ್ಕುಗಳನ್ನು ಗುರುತಿಸಿ ಎಲ್ಲ ಹಂತಗಳಲ್ಲಿ ದ್ವಿಪಕ್ಷೀಯ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಬೇಕು ಎಂದರು.
ಶ್ಯಾಮಲಾ, ಇಂದ್ರಮ್ಮ, ಜಯಮ್ಮ, ಮಹದೇವಮ್ಮ, ರಾಜಮ್ಮ, ದೇವಮ್ಮ, ಗಾಯತ್ರಿ, ಪುಷ್ಪಲತಾ, ಶಿವಮ್ಮ ಸುಶೀಲಾ, ಜಯಮ್ಮ, ರಾಜೇಶ್ವರಿ, ರಾಜಮ್ಮಣಿ, ವೆಂಕಟಮ್ಮ ಇದ್ದರು.