ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ

hhhhhh
Published on

ವಿಜಯಪುರ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ನೌಕರರ ಸಂಘದಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಸುನಂದಾ ನಾಯಕ ಮಾತನಾಡಿ, ಗ್ರಾಚ್ಯುಟಿ ಪಾವತಿಸಲು ಕೂಡಲೇ ಸರ್ಕಾರ ನಿರ್ದೇಶನ ನೀಡಬೇಕು. 1972 ರ ಗ್ರಾಚ್ಯುಟಿ ಕಾಯ್ದೆಯ ಪ್ರಕಾರ ಅಂಗನವಾಡಿ ನೌಕರರು ಗ್ರಾಚ್ಯುಟಿ ಪಡೆಯಲು ಅರ್ಹರು ಎಂಬ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ. ಅದರ ಪ್ರಕಾರ ರಾಜ್ಯಾದ್ಯಂತ ಸಾವಿರಾರು ನಿವೃತ್ತಿ ಹೊಂದಿದ ನೌಕರರರಿಗೆ ನಿವೃತ್ತಿಯ ಆದೇಶಗಳನ್ನು ನೀಡಿಲ್ಲ. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ 48 ವರ್ಷಗಳ ಇತಿಹಾಸದಲ್ಲಿ ಬಂದಂತಹ ಒಂದು ಸವಲತ್ತನ್ನು ಪಡೆಯಲು ಬೇಕಾದ ದಾಖಲಾತಿಗಳನ್ನು ಹೊಂದಿಸಿ ಕೊಳ್ಳಲು ಬಿಡದ ಇಲಾಖೆಯ ವ್ಯವಸ್ಥೆಯನ್ನು ಸರಿಪಡಿಸಬೇಕು. ಗ್ರಾಚ್ಯುಟಿಗೆ ಸಲ್ಲಿಸಿರುವ ಅರ್ಜಿದಾರರಿಗೆ ಕೂಡಲೇ ಪರಿಹಾರ ನೀಡಲು ರಾಜ್ಯ ಸಚಿವ ಸಂಪುಟ ಆದೇಶಿಸಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಿ, ಬಲಿಷ್ಠ ಪಡಿಸಬೇಕು. ಐಸಿಡಿಎಸ್ ಮಾರ್ಗದರ್ಶಿಸೂಚಿಗಳ ಪ್ರಕಾರ ಆರು ಸೇವೆಗಳಿಗೆ ಮಾತ್ರ ಅಂಗನವಾಡಿ ನೌಕರರನ್ನು ಬಳಸಬೇಕು. ಪೂರಕ ಪೌಷ್ಠಿಕ ಆಹಾರ, ರೋಗ ನಿರೋಧಕ ಚುಚ್ಚು ಮದ್ದು, ಅಂಗನವಾಡಿ ಕೇಂದ್ರದ ಕೆಲಸಗಳು ಕೇವಲ ಅಂಕಿ ಅಂಶ ದಾಖಲಾತಿಗಳನ್ನು ಸಂಗ್ರಹಿಸಲು ಸೇವೆ ಸಲ್ಲಿಸಬೇಕೆಂದಿದೆ. ಆದರೆ ಹೆಚ್ಚಿನ ಕೆಲಸಗಳಿಗೆ ದುಡಿಸಿಕೊಳ್ಳಲಾಗುತ್ತಿದೆ ಎಂದರು.

ಸಿಐಟಿಯು ಪ್ರಧಾನ ಕಾರ್ಯದರ್ಶಿ ಭೀಮಶಿ ಕಲಾದಗಿ ಮತ್ತು ಲಕ್ಷ್ಮಣ ಹಂದ್ರಾಳ ಮಾತನಾಡಿ, ಮಾತೃವಂದನಾ ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಸೌಲಭ್ಯಗಳನ್ನು ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಅದರಿಂದ ಒತ್ತಡ ಹೆಚ್ಚಾಗುತ್ತಿದೆ. ಅಂಗನವಾಡಿ ಕೇಂದ್ರಗಳಿಗೆ ಈಗ ನೀಡುತ್ತಿರುವ 12 ಲಕ್ಷ ರೂ. ಅನುದಾನವನ್ನು 20 ಲಕ್ಷ ರೂ.ಗೆ ಏರಿಸಿ ಅಂಗನವಾಡಿ ಕಟ್ಟಡಗಳನ್ನು ವ್ಯವಸ್ಥಿತಗೊಳಿಸಬೇಕು. ಅಂಗನವಾಡಿ ಮಕ್ಕಳಿಗೆ ಸಮವವಸ್ತ್ರ, ಶೂ, ಪುಸ್ತಕ, ಬ್ಯಾಗನ್ನು ಸರ್ಕಾರ ಉಚಿತವಾಗಿ ಒದಗಿಸಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ಕೇಂದ್ರಗಳಲ್ಲಿ ಮಾತೃಪೂರ್ಣ ಯಶಸ್ವಿ ಮಾಡಲು ಹೆಚ್ಚುವರಿ ಸಹಾಯಕಿಯನ್ನು ಕೊಡಬೇಕು. ಅಂಗನವಾಡಿ ಕೇಂದ್ರಗಳಿಗೆ ಎಲ್ಲಾ ರೀತಿಯ ಗುಣಾತ್ಮಕ ಮೂಲ ಸೌಲಭ್ಯಗಳನ್ನೊದಗಿಸಬೇಕು. 1995 ರಿಂದ ಆರಂಭವಾಗಿರುವ ಎಲ್ಲಾ ಯೋಜನೆಗಳಲ್ಲಿ ಆಯ್ಕೆಯಾಗಿರುವ ಅಂಗನವಾಡಿ ಕಾರ್ಯಕರ್ತೆಯರು, ಎಸ್‌ಎಸ್‌ಎಲ್‌ಸಿ ಪಾಸಾದವರು ಅನೇಕರು ಪದವೀಧರರು ಆಗಿರುವುದರಿಂದ ಅವರಿಗೆ ತರಬೇತಿಯನ್ನು ಕೊಟ್ಟು, ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್.ಕೆ.ಜಿ -ಯು.ಕೆ.ಜಿಯನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.

ಕಾರ್ಯಕರ್ತೆಯರಾದ ಸುರೇಖಾ ರಜಪೂತ, ಸುವರ್ಣಾ ಹಲಗಣಿ, ಯಮುನಾ ತೊರವಿ, ಜಯಶ್ರೀ ಪೂಜಾರಿ, ಶೈಲಾಜಾ ಕಟ್ಟಿ, ಸಾವಿತ್ರಿ ಗುಮಾಸ್ತೆ, ದಾನಮ್ಮ ಅರಕೇರಿ, ಗೀತಾ ನಾಯಕ, ಚನ್ನಮ್ಮ ಖಾನಾಪುರ, ಸಿದ್ದಮ್ಮ ಶಿರೋಳಕರ, ಕಮಲಾ ಕುಲಕರ್ಣಿ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net