

ಮಂಡ್ಯ: ಕನಿಷ್ಟ ವೇತನ ಘೋಷಣೆಗೆ ಆಗ್ರಹಿಸಿ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರು ಸಂಸದರ ಕಚೇರಿ ಚಲೋ ನಡೆಸಿದರು. ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಕ್ಷರ ದಾಸೋಹ ನೌಕರರು ಸಿಲ್ವರ್ ಜ್ಯೂಬಿಲಿ ಉದ್ಯಾನದಿಂದ ಮೆರವಣಿಗೆ ಹೊರಟು ಸಂಸದರ ಕಚೇರಿಗೆ ತೆರಳಿ ಧರಣಿ ನಡೆಸಿದರು.
ಕೇಂದ್ರ ಸರ್ಕಾರ ಫೆಬ್ರವರಿಯಲ್ಲಿ ಮಂಡಿಸಲಿರುವ ಬಜೆಟ್‌ನಲ್ಲಿ ಎಂಡಿಎಂ ಯೋಜನೆಗೆ ಅನುದಾನ ಹೆಚ್ಚಿಸಬೇಕು. ಆಹಾರ, ಆರೋಗ್ಯ, ಶಿಕ್ಷಣ ಯೋಜನೆಗಳಾದ ಐಸಿಡಿಎಸ್, ಎಂಡಿಎಂ, ಎನ್‌ಎಚ್‌ಎಂ, ಐಸಿಪಿಎಸ್, ಎಸ್‌ಎಸ್‌ಎ, ಎಂಎನ್‌ಆರ್‌ಇಜಿ ಯೋಜನೆಗಳನ್ನು ಖಾಯಂ ಮಾಡುವ ಮೂಲಕ ಯೋಜನೆಯ ಹಕ್ಕುಗಳನ್ನು ಸಾರ್ವತ್ರಿಕಗೊಳಿಸಬೇಕು. ಯೋಜನೆಯ ನೌಕರರಿಗೆ ಕನಿಷ್ಟ ವೇತನ ನಿವೃತ್ತಿ ಸೌಲಭ್ಯ ಕಲ್ಪಿಸಿ ನೌಕರರು ಎಂದು ಪರಿಗಣಿಸಬೇಕು. ಅಕ್ಷರ ದಾಸೋಹ ಕೈಪಿಡಿಯಲ್ಲಿ ಕೆಲಸದ ಅವಧಿಯನ್ನು ನಾಲ್ಕರಿಂದ ಆರು ಗಂಟೆ ಎಂದು ಬದಲಾಯಿಸಬೇಕು. ಬಿಸಿಯೂಟ ನೌಕರರಿಗೆ ಪರಿಹಾರ ನೀಡದೆ ನಿವೃತ್ತಿ ಮಾಡಬಾರದು. ಈಗಾಗಲೇ ನಿವೃತ್ತಿಯಾಗಿರುವವರಿಗೆ ಇಡಿಗಂಟು ನೀಡಬೇಕೆಂದು ಆಗ್ರಹಿಸಿದರು.
ಅಕ್ಷರ ದಾಸೋಹ ಯೋಜನೆಯನ್ನು ಶಿಕ್ಷಣ ಇಲಾಖೆಯಡಿ ನಡೆಸಬೇಕು. ಕಾರ್ಮಿಕ ಕಾನೂನುಗಳ ಸಂಹಿತೆಗಳಾಗಿ ಮಾಡಿರುವುದನ್ನು ಕೈಬಿಟ್ಟು ಕಾರ್ಮಿಕರ ಪರ ನೀತಿ ಜಾರಿಗೊಳಿಸಬೇಕು. ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ರಚಿಸಿರುವ ಸಾಮಾಜಿಕ ಭದ್ರತಾ ಮಂಡಳಿಯನ್ನು ಬಲಪಡಿಸಿ ವಾರ್ಷಿಕ ನಿವ್ವಳ ಆದಾಯದ ಶೇ.3ರಷ್ಟು ಅನುದಾನವನ್ನು ಅಸಂಘಟಿತ ಕಾರ್ಮಿಕರ ಕಾರ್ಯಕ್ರಮಗಳಿಗೆ ಘೋಷಿಸಬೇಕು ಎಂದು ಒತ್ತಾಯಿಸಿದರು.
ಇ ಶ್ರಮ ಗುರುತಿನ ಚೀಟಿ ಪಡೆದಿರುವ ಅಸಂಘಟಿತ ಕಾರ್ಮಿಕ ಕುಟುಂಬ ವರ್ಗದವರಿಗೆ ಉಚಿತ ಶಿಕ್ಷಣ, ಆರೋಗ್ಯ, ಪಡಿತರ ಹಾಗೂ ವಸತಿ ಯೋಜನೆ ಜಾರಿಗೊಳಿಸಬೇಕು. ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಕೆಲಸದ ಅವಧಿ ಹೆಚ್ಚಳ ಮಾಡಿರುವ ಕಾರ್ಖಾನೆ ಕಾಯ್ದೆ ತಿದ್ದುಪಡಿ ಕೈಬಿಡಬೇಕು. ನ್ಯಾಯಾಲಯದ ತೀರ್ಪಿನಂತೆ ಬಿಸಿಯೂಟ ನೌಕರರನ್ನು ಉದ್ಯೋಗಸ್ಥರೆಂದು ಪರಿಗಣಿಸಿ ಗ್ರಾಚ್ಯುಟಿ ಕಾಯ್ದೆ ಜಾರಿಗೊಳಿಸಬೇಕು. ಅದೇ ರೀತಿ ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆದು ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ಖಾತ್ರಿಪಡಿಸಬೇಕು. ರಾಜ್ಯ ಸರ್ಕಾರ 6ನೇ ಗ್ಯಾರಂಟಿಯಾಗಿ 6 ಸಾವಿರೂ ವೇತನ ಹೆಚ್ಚಳ ಮಾಡಿ ನಿವೃತ್ತಿ ಸೌಲಭ್ಯ ಕಲ್ಪಿಸಬೇಕು. ಜಂಟಿ ಖಾತೆ ಜವಾಬ್ದಾರಿಯನ್ನು ಮುಖ್ಯ ಅಡುಗೆ ನೌಕರರಿಂದ ಎಸ್‌ಡಿಎಂಸಿಗೆ ವರ್ಗಾವಣೆ ಮಾಡಿರುವುದನ್ನು ವಾಪಸ್ ಪಡೆಯಬೇಕು. 2022ರಿಂದ ನಿವೃತ್ತಿಯಾಗಿರುವರಿಗೆ 1 ಲಕ್ಷ ರೂ ಇಡುಗಂಟು ಕೊಡಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಸಂಘಟನೆಯ ನಾಗರಾಜು, ಸಿ.ಕುಮಾರಿ, ಕೃಷ್ಣೇಗೌಡ, ಮಹದೇವಮ್ಮ, ಎ.ಬಿ ಶಶಿಕಲಾ, ಎಂ.ಲಕ್ಷ್ಮೀ, ವೆಂಕಟಲಕ್ಷ್ಮೀ, ಪುಟ್ಟಮ್ಮ, ಶೋಭಾ, ವನಜಾಕ್ಷಿ, ಸುಜಾತಾ ಇತರರಿದ್ದರು.