ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

10 (2)
Published on

ಮೈಸೂರು: ದೆಹಲಿಯಲ್ಲಿ ಪತ್ರಕರ್ತರು, ಸಾಮಾಜಿಕ ಹಾಗೂ ವಿಜ್ಞಾನ ಚಳವಳಿ ಕಾರ್ಯಕರ್ತರ ಮೇಲಿನ ಪೊಲೀಸರ ದಾಳಿ ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.


ಪ್ರಜಾಪ್ರಭುತ್ವ ನೆಲೆ ಎಂದು ಬಣ್ಣಿಸಲ್ಪಡುವ ಭಾರತದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ. ದೆಹಲಿ ಪೊಲೀಸರು ಹಲವು ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರ ಮನೆಗಳಿಗೆ ನುಗ್ಗಿ ಲ್ಯಾಪ್‌ಟಾಪ್, ಮೊಬೈಲ್, ಹಾರ್ಡ್‌ಡಿಸ್ಕ್ ಹಾಗೂ ಇಬ್ಬರು ಪತ್ರಕರ್ತರನ್ನು ವಶಪಡಿಸಿಕೊಂಡಿದ್ದು, ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸ್ವಾವಲಂಬಿ ಜನಕೇಂದ್ರಿತ ಅಭಿವೃದ್ಧಿ ಪ್ರತಿಪಾದಿಸುವ ಪ್ರಬೀರ್ ಪುರಕಾಯಸ್ಥ, ವಿಜ್ಞಾನ ವೇದಿಕೆ ಚಳವಳಿ ಕಾರ್ಯಕರ್ತ ರಘುನಂದನ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇದು ಭಿನ್ನ ಅಭಿಪ್ರಾಯ ಹೊಂದಿರುವವರ ಧ್ವನಿ ಅಡಗಿಸುವ ಹುನ್ನಾರ ಎಂದು ಕಿಡಿ ಕಾರಿದರು.


ಮಾಧ್ಯಮ ಕಾವಲುಗಾರನಂತೆ ನಿರ್ಭೀತ, ಸ್ವತಂತ್ರ, ಸ್ವಾಯತ್ತ ನೆಲೆಯಲ್ಲಿ ತನ್ನ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಅದನ್ನು ನಿಯಂತ್ರಣ ಮಾಡಲು ಹೊರಟಿರುವ ಒಕ್ಕೂಟ ಸರ್ಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾಶ ಮಾಡುತ್ತಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಕೆಲಸ ಮಾಡುವವರನ್ನು, ತಮ್ಮನ್ನು ವಿರೋಧಿಸುವವರನ್ನು ಕ್ರೂರವಾಗಿ ಬೇಟೆಯಾಡುವುದನ್ನು ನಿಲ್ಲಿಸಬೇಕು. ಭಿನ್ನ ಅಭಿಪ್ರಾಯಗಳನ್ನು ಹತ್ತಿಕ್ಕಲು ಶಸ್ತ್ರದಂತೆ ಬಳಸುತ್ತಿರುವ ಯುಎಪಿಎಯಂತಹ ಕರಾಳ ಕಾನೂನನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಒಕ್ಕೂಟದ ಅಧ್ಯಕ್ಷ ಕಾಳಚನ್ನೇಗೌಡ, ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ರತಿರಾವ್, ರಂಗಕರ್ಮಿ ಸಿ.ಬಸವಲಿಂಗಯ್ಯ, ಹೋರಾಟಗಾರರಾದ ನಾ.ದಿವಾಕರ್, ಲಾ.ಜಗನ್ನಾಥ್, ಜಗದೀಶ್ ಸೂರ್ಯ, ಶೀಲಾ, ಸೀಮಾ, ರವಿ, ಪಂಡಿತಾರಾಧ್ಯ, ಬಸವರಾಜ್, ಪ್ರದೀಪ್ ಜಿ.ರಾಜೇಂದ್ರ, ಚೌಡಳ್ಳಿ ಜವರಯ್ಯ, ಪುಟ್ಟಮಾದಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net