

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು ಪರೀಕ್ಷಾ ಫಲಿತಾಂಶ ಪ್ರಕಟಿಸಲು ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ಅಭ್ಯರ್ಥಿಗಳು ನಿನ್ನೆ ಕೆಪಿಎಸ್ಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದು, ಇಂದು ಅವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಕಾಂಗ್ರೆಸ್ ವಕ್ತಾರೆ ಭವ್ಯಾ ನರಸಿಂಹಮೂರ್ತಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದ್ದು, ಆಕೆಯ ಜೊತೆಗೆ ಇನ್ನೂ ಆರು ಮಂದಿಯ ವಿರುದ್ಧ ವಿಧಾನಸೌಧ ಠಾಣೆಯ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
ನಿನ್ನೆ ಭವ್ಯಾ ನೇತೃತ್ವದಲ್ಲಿ ಸುಮಾರು 200 ಮಂದಿ ಕೆಪಿಎಸ್ಸಿ ಕಚೇರಿ ಎದುರು ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ್ದಾರೆ. ಅನುಮತಿ ಪಡೆಯದೇ ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ, ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಆಗುತ್ತಿದ್ದು, ಸ್ಥಳ ತೆರವುಗೊಳಿಸುವಂತೆ ಸೂಚನೆ ನೀಡಿದ್ದರೂ ಅವರು ಪ್ರತಿಭಟನೆ ಮುಂದುವರಿಸಿದ್ದಾರೆ. ಹೈಕೋರ್ಟ್ ಆದೇಶ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ್ದಷ್ಟೇ ಅಲ್ಲದೆ, ತಮ್ಮ ಸೂಚನೆಯನ್ನು ಲೆಕ್ಕಿಸದೆ ಸ್ಥಳ ತೆರವುಗೊಳಿಸದ ಇವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.