

ಬೆಳಗಾವಿ: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕನಿಷ್ಠ ವೇತನ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ನಗರದ ಚನ್ನಮ್ಮ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎದರು ಜಮಾಯಿಸಿದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ಇಎಸ್‌ಐ, ಪಿಎಫ್, ಪಿಂಚಣಿ ಇತರ ಸೌಲಭ್ಯಗಳನ್ನು ಕೊಡಬೇಕು. ನಮಗೆ ಗ್ಯಾಚುಟಿ ಕೊಡುವಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಕೋಡಲೇ ಜಾರಿ ಮಾಡಬೇಕು. ಏಕರೂಪ ಸೇವಾ ನಿಯಮಗಳನ್ನು ರೂಪಿಸಬೇಕು. ಸಂಘಟನೆ ಮಾಡಿದ ಮತ್ತು ಮುಷ್ಕರಗಳಲ್ಲಿ ಭಾಗವಹಿಸಿದ ಕಾರಣಕ್ಕಾಗಿ ದೆಹಲಿಯಲ್ಲಿ ಕಾನೂನು ಬಾಹಿರವಾಗಿ ಕೆಲಸದಿಂದ ವಜಾ ಮಾಡಿದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ಕೂಡಲೇ ಮರು ನೇಮಕ ಮಾಡಬೇಕು. ಫೋಷಣ್ ಅಭಿಯಾನಕ್ಕೆ ಆಧಾರ್ ಅಥವಾ ಪೋನ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ ಎಂಬ ಆದೇಶವನ್ನು ಹಿಂಪಡೆಯಬೇಕು. ಪರಿಣಾಮಕಾರಿಯಾಗಿ ಕೆಲಸ ಮಾಡಲು ಗುಣಮಟ್ಟದ ಮೊಬೈಲ್‌ಗಳನ್ನು ನೀಡಬೇಕು ಹಾಗೂ ಹಂತ ಹಂತವಾಗಿ ಮೊಬೈಲ್‌ಗಳ ಬದಲಾಗಿ ಟ್ಯಾಬ್ ನೀಡಬೇಕು. ಇತರೆ ಇಲಾಖೆಗಳ ಕೆಲಸಗಳನ್ನು ಹಚ್ಚಬಾರದು ಎನ್ನುವುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಜಿ.ವಿ. ಕುಲಕರ್ಣಿ, ಮಂದಾ ನೇವಗಿ, ಸಂಧ್ಯಾ ಕುಲಕರ್ಣಿ, ಶೋಭಾ ತಳವಾರ, ಮೀನಾಕ್ಷ ದಫಡೆ, ಶೈಲಜಾ ಕುಲಕರ್ಣಿ, ಗುಲಾಬಿ ಗುರ್ಜರ, ಕೃಷ್ಣಾ ತೋಪಿನಕಟ್ಟಿ ಇತರರಿದ್ದರು.