

ಅರಸೀಕೆರೆ : ಸರ್ಕಾರ ರೈತರಿಗೆ ಬಗರ್ ಹುಕುಂ ಸಾಗುವಳಿ ಚೀಟಿ ನೀಡುವಂತೆ ಒತ್ತಾಯಿಸಿ ಹೋರಾಟ ನಡೆಯುತ್ತಿದ್ದು ಕೆಲವರು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ರೈತ ಸಂಘದ ರಾಜ್ಯ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ನಗರದ ತಾಲೂಕು ಕಚೇರಿ ಬಳಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ದಾಖಲೆಗಳ ರಾಶಿಯನ್ನು ತಾಲೂಕು ಕಚೇರಿ ಮುಂಭಾಗ ಸುರಿದು ಅವರು ಮಾತನಾಡಿದರು.
ಹಲವು ವರ್ಷಗಳಿಂದ ಗೋಮಾಳ ಸೇರಿ ಸರ್ಕಾರಿ ಭೂಮಿ ಉಳುಮೆ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡುವಂತೆ ಒಗ್ಗಟ್ಟಿನ ಹೋರಾಟ ನಡೆಸಲಾಗಿದೆ. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೆಹಲಿ, ಬೆಂಗಳೂರಿಗೆ ತೆರಳಿ ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮನವಿ ಮಾಡಿದ್ದೇವೆ. ವಾಸ್ತವ ಗೊತ್ತಿದ್ದರೂ ಅಗ್ಗದ ಪ್ರಚಾರ ಗಿಟ್ಟಿಸಲು ಹೊರಟಿರುವ ಕೆಲ ಕಿಡಿಗೇಡಿಗಳು ಇನ್ನೊಬ್ಬರ ಮಾತು ಕೇಳಿ ಹೋರಾಟವೇ ಹುಸಿ ಎಂಬಂತೆ ಮಾತನಾಡುತ್ತಿದ್ದಾರೆ. ಅಂಥವರು ನಮ್ಮ ಬಳಿ ಇರುವ ಸಾಕ್ಷಿ ಗುಡ್ಡೆ ನೋಡಿ ಮಾತನಾಡಲಿ. ಭೂಮಾಫಿಯಾ ಜತೆ ಕೈಜೋಡಿಸಿ ಅನುಕೂಲ ಪಡೆಯಲು ಹೊರಟಿರುವ ನಕಲಿ ಗಿರಾಕಿಗಳ ಆರೋಪಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಮುಖಂಡರಾದ ಜವನಹಳ್ಳಿ ನಿಂಗಪ್ಪ, ಅಯೂಬ್ ಪಾಷಾ,ನಂಜಮ್ಮ ದಸ್ತಗೀರ್, ಏಜಾಜ್ ಪಾಷಾ ಸೇರಿದಂತೆ ನೂರಾರು ರೈತರು ಹಾಜರಿದ್ದರು.