ಗಾಣಿಗ-ಹಾಲುಮತ ಸಮುದಾಯದ ನಿಂದನೆ, ಶಾಸಕ ಯಶವಂತರಾಯಗೌಡ ಮೇಲೆ ಕ್ರಮ ಕೈಗೊಳ್ಳು ಆಗ್ರಹಿಸಿ ಪ್ರತಿಭಟನೆ-ಮನವಿ

GANIGA-KURUBA SAMAJA MANAVI
ವಿಜಯಪುರ ಜಿಲ್ಲಾಡಳಿತಕ್ಕೆ ಗಾಣಿಗ ಹಾಗೂ ಹಾಲುಮತ (ಕುರುಬ) ಸಮುದಾಯದ ಮುಖಂಡರು ಮನವಿ ಸಲ್ಲಿಸಿದರು. ಮುಖಂಡರಾದ ನಂದು ಗಡಗಿ, ಸುರೇಶ ಪಾಟೀಲ್ (ನೇದಲಾಗಿ), ಜಟ್ಟು ಬಿರಾದಾರ ಮತ್ತಿತರರಿದ್ದಾರೆ.
Published on

ವಿಜಯಪುರ: ಗಾಣಿಗ ಹಾಗೂ ಹಾಲುಮತ (ಕುರುಬ) ಸಮುದಾಯವನ್ನು ಅವಾಚ್ಯವಾಗಿ ನಿಂದಿಸಿರುವ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಎರಡೂ ಸಮುದಾಯಗಳ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಳಿತಕ್ಕೆ ಮನವಿ ಸಲ್ಲಿಸಿದರು.

ಇಲ್ಲಿನ ಜಿಲ್ಲಾಡಳಿತ ಕಚೇರಿ ಎದುರು ಕೆಲ ಕಾಲ ಶಾಸಕ ಯಶವಂತರಾಯಗೌಡ ಪಾಟೀಲ ವಿರುದ್ಧ ಘೋಷಣೆ ಕೂಗಿದ ಮುಖಂಡರುಗಳು, ಶಾಸಕ ಯಶವಂತರಾಯಗೌಡ ಪಾಟೀಲರು ಗಾಣಿಗ ಮತ್ತು ಹಾಲುಮತ (ಕುರುಬ) ಸಮುದಾಯವನ್ನು ಅವಾಚ್ಯವಾಗಿ ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅದನ್ನಾಧರಿಸಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮುಖಂಡ ದಯಾಸಾಗರ ಪಾಟೀಲ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರಾಡಿರುವ ಪದಗಳು ಎರಡೂ ಸಮುದಾಯಗಳ ಮನಸ್ಸಿಗೆ ಘಾಸಿ ಮಾಡಿವೆ. ತುಂಬ ನೋವಾಗಿದೆ. ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳು ಅವಾಚ್ಯವಾಗಿ ನಿಂದಿಸಿದರೆಂಬ ಕಾರಣಕ್ಕೆ ಜಿಲ್ಲಾಡಳಿತ ಅವರ ಮೇಲೆ ನಿರ್ಬಂಧ ಹೇರಿದೆ. ಅಂಥದ್ದೇ ಪದವನ್ನು ಶಾಸಕ ಯಶವಂತರಾಯಗೌಡ ಪಾಟೀಲ ಬಳಸಿದ್ದು, ಅವರ ಮೇಲೆ ಕ್ರಮವೇಕಿಲ್ಲ? ಕನ್ಹೇರಿ ಸ್ವಾಮೀಜಿಗಳಿಗೊಂದು ನ್ಯಾಯ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರಿಗೊಂದು ನ್ಯಾಯವೇ? ಎಂದರು.

ಶಾಸಕ ಯಶವಂತರಾಯಗೌಡ ಪಾಟೀಲರನ್ನೂ ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧ ವಿಧಿಸಬೇಕು. ಅವರ ಮೇಲೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಬೇಕು. ಇಲ್ಲದೇ ಹೋದರೆ ಸಮಾಜದಲ್ಲಿ ಸ್ವಾಸ್ಥ್ಯ ಕೆಡಲಿದೆಯಲ್ಲದೇ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರುವ ಸಾಧ್ಯತೆ ಇದೆ ಎಂದರು.

ಮುಖಂಡರಾದ ನಂದು ಗಡಗಿ, ಸುರೇಶ ಪಾಟೀಲ್ (ನೇದಲಾಗಿ), ಜಟ್ಟು ಬಿರಾದಾರ, ಪ್ರಕಾಶ ಮಲಘಾಣ, ರಾಜು ಗೋಡಿ, ಗುರುನಾಥ ಹುಳಗಬಾಳ, ಸಂತೋಷ ಜರಾಜೋಳ, ಪರಶುರಾಮ ಗುಡದಿನ್ನಿ, ಬಸವರಾಜ ಮಡ್ಡಿ, ಸಂತೋಷ ಪಾಟೀಲ, ಲಕ್ಷ್ಮಿ ಕನ್ನೊಳ್ಳಿ, ಗಜಾಸುರ ಪುಟಾಣಿ, ಜಟ್ಟು ಮರಡಿ, ಆರ್.ಡಿ. ಪಾಟೀಲ, ಗೌಡಪ್ಪ ಬಿರಾದಾರ, ಅಣ್ಣಪ್ಪ ಮದರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net