ಸಾಗರಮಾಲ ಕಾಮಗಾರಿ ವಿರುದ್ಧ ಪ್ರತಿಭಟನೆ

sagaramaala
Published on

ಮಂಗಳೂರು: ಕೇಂದ್ರ ಸರ್ಕಾರದ ‘ಸಾಗರಮಾಲ’(ಕೋಸ್ಟಲ್ ಬರ್ತ್) ಯೋಜನೆ ಕಾಮಗಾರಿ ವಿರೋಧಿಸಿ ‘ಕೋಸ್ಟಲ್ ಬರ್ತ್ ವಿರೋಧಿ ಹೋರಾಟ ಸಮಿತಿ’ ನೇತೃತ್ವದಲ್ಲಿ ಸೋಮವಾರ ಕಸ್ಬಾ ಬೆಂಗ್ರೆಯ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿ ಯೋಜನೆಯ ಕೈಪಿಡಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗ್ಗೆ 8ಕ್ಕೆ ಆರಂಭಗೊಂಡ ಪ್ರತಿಭಟನೆ ಸಾಯಂಕಾಲ 6ರ ತನಕ ಮುಂದುವರಿಯಿತು. ಒಂದೆಡೆ ಪ್ರತಿಭಟನೆ ನಡೆಯುತ್ತಿದ್ದರೆ, ಇನ್ನೊಂದೆಡೆ ಸಾಗರಮಾಲ ಯೋಜನೆಯ ಕಾಮಗಾರಿ ಸಾಗುತ್ತಿತ್ತು. ಹಾಗಾಗಿ 500ಕ್ಕೂ ಅಧಿಕ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು. ಸ್ಥಳಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಭೇಟಿ ನೀಡಿ ಯಾವುದೇ ಕಾರಣಕ್ಕೂ ಪೊಲೀಸ್ ಇಲಾಖೆ ಜತೆ ನಾಗರಿಕರು ಸಂಘರ್ಷಕ್ಕಿಳಿಯದೆ ಶಾಂತಿಯುತ ಪ್ರತಿಭಟನೆ ನಡೆಸಲು ಮನವಿ ಮಾಡಿದರಲ್ಲದೆ, ಜಿಲ್ಲಾಡಳಿತದ ಜತೆ ಮಾತುಕತೆ ನಡೆಸಲು ಸಲಹೆ ನೀಡಿದರು.

ನಾವಿಲ್ಲಿ ಸುಮಾರು 200 ವರ್ಷದಿಂದ 3 ಸಾವಿರಕ್ಕೂ ಅಧಿಕ ಮನೆಗಳಲ್ಲಿ 25 ಸಾವಿರಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದೇವೆ. ನಮಗೆ ಇನ್ನೂ ಮೂಲಸೌಕರ್ಯ ಸಿಕ್ಕಿಲ್ಲ. ಪಿಯುಸಿ, ಪದವಿ ಕಾಲೇಜಿನ ನಿರೀಕ್ಷೆಯಲ್ಲಿ ನಾವಿದ್ದೇವೆ. ಆದರೆ ಸರ್ಕಾರ ಅದನ್ನು ಕಲ್ಪಿಸದೆ ಸಾಗರಮಾಲ ಯೋಜನೆ ಜಾರಿಗೊಳಿಸಲು ಸರ್ಕಾರಿ ಪ್ರೌಢಶಾಲೆಯನ್ನೇ ಬಲಿ ಪಡೆಯುತ್ತಿದೆ. ಇಲ್ಲಿ ಯಾವುದೇ ಬ್ಯಾಂಕ್ ಶಾಖೆ ಇಲ್ಲ, ಎಟಿಎಂ ಇಲ್ಲ. ಕುಡಿಯುವ ನೀರಿನ ಸೌಲಭ್ಯವಿಲ್ಲ, ಒಳಚರಂಡಿ ವ್ಯವಸ್ಥೆಯೂ ಇಲ್ಲ. ಅದನ್ನೆಲ್ಲ ಕಲ್ಪಿಸುವುದನ್ನು ಬಿಟ್ಟು ನಮ್ಮನ್ನು ಇಲ್ಲಿಂದ ಸ್ಥಳಾಂತರಿಸಲು ಪ್ರಯತ್ನಿಸುತ್ತಿವೆ. ಹಾಗಾಗಿ ಯಾವ ಕಾರಣಕ್ಕೂ ನಾವು ಈ ಯೋಜನೆಯನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಘೋಷಣೆ ಕೂಗಿದರು.

ಕಾರ್ಪೊರೇಟರ್ ಮುನೀಬ್ ಬೆಂಗ್ರೆ ಮಾತನಾಡಿ, ಇಂದಿನದ್ದು ಸಾಂಕೇತಿಕ ಪ್ರತಿಭಟನೆ. ಸರ್ಕಾರ ಯೋಜನೆ ಕೈ ಬಿಡದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಕಸಬಾ ಬೆಂಗ್ರೆ ಮಸೀದಿ ಅಧ್ಯಕ್ಷ ಅಸ್ಲಂ ಬೆಂಗ್ರೆ ಅಧ್ಯಕ್ಷತೆ ವಹಿಸಿದ್ದರು. ಮಸೀದಿ ಉಪಾಧ್ಯಕ್ಷ ಕೆಬಿಆರ್ ಸುಲೈಮಾನ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಬಿ.ಎ.ಮೊದಿನ್ ಬಾವ, ಐವನ್ ಡಿಸೋಜ, ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಎಸ್‌ಡಿಟಿಯು ರಾಜ್ಯ ಮುಖಂಡ ಜಲೀಲ್ ಕೃಷ್ಣಾಪುರ ಮೊದಲಾದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net