

ಸುರತ್ಕಲ್: ಎನ್‌ಐಟಿಕೆ ಟೋಲ್ ಕೇಂದ್ರದಲ್ಲಿ ಫೆ.15ರಿಂದ ಸ್ಥಳೀಯ(ಕೆಎ 19) ಖಾಸಗಿ ವಾಹನಗಳಿಗೂ ಟೋಲ್ ಕಡ್ಡಾಯ ಆದೇಶದ ವಿರುದ್ಧ ಸ್ಥಳೀಯರು ಮತ್ತೆ ಅಸಮಾಧಾನ ಹೊರಹಾಕಿದ್ದಾರೆ. ಭಾನುವಾರ ಮುಕ್ಕ ಸತ್ಯಧರ್ಮ ದೇವಿ ದೇವಸ್ಥಾನದಲ್ಲಿ ಆಯೋಜಿಸಲಾದ ಸಮಾಲೋಚನಾ ಸಭೆಯಲ್ಲಿ ವಿವಿಧ ಸಂಘಟನೆಗಳ 44ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿ, ಹೋರಾಟದ ಹಾದಿ ತುಳಿಯುವ ನಿಧಾ ರರ್ ಕೈಗೊಂಡಿದ್ದಾರೆ.
ಟೋಲ್ ಕಡ್ಡಾಯ ಆದೇಶದ ವಿರುದ್ಧ ಶಾಸಕ, ಸಂಸದ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಸದ್ಯ ತೀರ್ಮಾಣ ಕೈಗೊಳ್ಳಲಾಗಿದೆ. ಫೆ.10ರಂದು ಮುಂದಿನ ಸಭೆ ನಡೆಸಿ, ಹೋರಾಟದ ಅಂತಿಮ ರೂಪುರೇಷೆ ಸಿದ್ಧಪಡಿಸಲು ಸಭೆ ನಿರ್ಧರಿಸಿದೆ.
ವಿವಿಧ ಸಂಘಟನೆಗಳ ಪ್ರಮುಖರಾದ ಯತೀಶ್ ಬೈಕಂಪಾಡಿ, ಕೆಎಸ್‌ಐಎ ಬೈಕಂಪಾಡಿ ಮಾಜಿ ಅಧ್ಯಕ್ಷ ಗೌರವ್ ಹೆಗ್ಡೆ, ಉದ್ಯಮಿ ಪಿ.ಗಣೇಶ್ ಐತಾಳ್, ಮೀನುಗಾರ ಮುಂದಾಳು ದಿನಕರ್ ಮುಕ್ಕ, ಉದ್ಯಮಿ ರವಿರಾಜ್ ಸುವರ್ಣ ಮುಕ್ಕ, ಪಿ.ಜಿ.ಕುಂದರ್ ಮುಕ್ಕ, ಮಾಜಿ ಕೌನ್ಸಿಲರ್ ಕೆ.ಎಸ್.ಉಸ್ಮಾನ್ ಮುಕ್ಕ, ಅಕ್ಬರಾಲಿ ಮುಕ್ಕ, ಖಂಡಿಗೆ ಬೀಡು ದಯಾನಂದ ಶೆಟ್ಟಿ, ಮಹಾಬಲ ರೈ ಮುಕ್ಕ, ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷ ಪ್ರೊ.ಕೆ.ರಾಜ್ ಮೋಹನ್ ರಾವ್, ಕಾರ್ಯದರ್ಶಿ ಸತೀಶ್ ಸದಾನಂದ್ ಹೊಸಬೆಟ್ಟು, ಸುರತ್ಕಲ್ ರೋಟರಿ ಕಾರ್ಯದರ್ಶಿ ಡಾ.ಅರವಿಂದ್, ವಿದ್ಯಾಲಕ್ಷ್ಮೀ ಅರವಿಂದ್, ಸುರತ್ಕಲ್ ಜೆಸಿಐನ ಎಂ.ಜಿ.ರಾಮಚಂದ್ರ ಮುಕ್ಕ, ಅನಿಲ್ ಕುಮಾರ್ ಸಸಿಹಿತ್ಲು, ವಿನೋದ್ ಕುಮಾರ್ ಸಸಿಹಿತ್ಲು, ಅರುಣಾ, ಮುಕ್ಕ ಸುರತ್ಕಲ್ ಆಪದ್ಬಾಂದವ ಸಮಾಜ ಸೇವಾ ಸಂಘದ ಅಧ್ಯಕ್ಷ ಉಮೇಶ್ ದೇವಾಡಿಗ ಇಡ್ಯಾ ಸಹಿತ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಹೆಜಮಾಡಿ ಟೋಲ್ ವಿರುದ್ಧವೂ ಮುನಿಸು: ಆಕ್ರೋಶ ವ್ಯಕ್ತಪಡಿಸಿದ ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿ: ಮೂಲ್ಕಿ: ಟೋಲ್ ಸುತ್ತಳತೆಯ 15 ಕಿ.ಮೀ.ವ್ಯಾಪ್ತಿಯ ಜನರಿಗೆ ಶುಲ್ಕರಹಿತ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದರೂ ಹೆಜಮಾಡಿ ಟೋಲ್ ಗೇಟ್‌ನಲ್ಲಿ ಮೂಲ್ಕಿ ಪರಿಸರದ ಜನರಿಂದ ವಸೂಲಿ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಬಗ್ಗೆ ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿ ಸಭೆ ನಿರ್ಧರಿಸಿದೆ.
ಭಾನುವಾರ ಶ್ರೀ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಮೂಲ್ಕಿ ನಪಂ ಸದಸ್ಯ ಯೋಗೀಶ್ ಕೋಟ್ಯಾನ್ ಮಾತನಾಡಿ, ಮೂಲ್ಕಿಯಲ್ಲಿ ಹೆದ್ದಾರಿ ಸರ್ವಿಸ್ ರಸ್ತೆ ಕಳೆದ ಕೆಲ ವರ್ಷಗಳಿಂದ ಅವ್ಯವಸ್ಥೆಯಿಂದ ಕೂಡಿದೆ. ಹೆದ್ದಾರಿ ಕಾಮಗಾರಿ ಪೂರ್ತಿಗೊಳಿಸದೆ ಟೋಲ್ ವಸೂಲಿ ಅಪರಾಧ. ನಪಂ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಶಾಸಕರು ಹೆದ್ದಾರಿ ಸರ್ವಿಸ್ ರಸ್ತೆ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಒಂದು ತಿಂಗಳಿನ ಒಳಗೆ ಪೂರ್ತಿ ಮಾಡಬೇಕೆಂದು ಎಚ್ಚರಿಕೆ ನೀಡಿದ್ದರು. ಆದರೆ, ಹೆದ್ದಾರಿ ಇಲಾಖೆ ಅಧಿಕಾರಿಗಳು ಇದನ್ನು ನಿರ್ಲಕ್ಷಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ಮಾತನಾಡಿ, ಶಾಸಕರು, ಸಂಸದರು ಹಾಗೂ ಜಿಲ್ಲಾಧಿಕಾರಿ ಜತೆ ಸಭೆ ನಡೆಸಿ ಅಹವಾಲುಗಳನ್ನು ಮಂಡಿಸಿ ಮುಂದಿನ ಹೋರಾಟಕ್ಕೆ ಸಿದ್ಧರಾಗೋಣ ಎಂದರು.
ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸುಭಾಷ್ ಶೆಟ್ಟಿ, ಮೂಲ್ಕಿ ಟೂರಿಸ್ಟ್ ಕಾರು ಚಾಲಕ ಮಾಲೀಕರ ಸಂಘದ ಮಧು ಆಚಾರ್ಯ, ಉದ್ಯಮಿ ಕಮಲಾಕ್ಷ ಬಡಗುಹಿತ್ಲು ಮಾತನಾಡಿದರು. ಮೂಲ್ಕಿಯಲ್ಲಿ ಒಳಚರಂಡಿ ಅವ್ಯವಸ್ಥೆ, ಬೀದಿ ನಾಯಿ ಹಾವಳಿಗಳ ಬಗ್ಗೆ ಚರ್ಚೆ ನಡೆಯಿತು. ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿಯ ಹರೀಶ್ ಪುತ್ರನ್, ಶಿವಾನಂದ ಕಾಮತ್, ರವೀಶ್ ಕಾಮತ್, ನಾರಾಯಣ್, ಅಶೋಕ್ ಕುಮಾರ್ ಶೆಟ್ಟಿ, ಸುಜಿತ್ ಸಾಲ್ಯಾನ್, ಉದಯಕುಮಾರ್ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.
ಮೂಲ್ಕಿಯಿಂದ ಹೆಜಮಾಡಿ ಟೋಲ್‌ಗೇಟ್ ಅರ್ಧ ಕಿ.ಮೀ. ದೂರದಲ್ಲಿದೆ. ಆದರೂ, ಮೂಲ್ಕಿ ನಾಗರಿಕರಿಂದ ವಾಹನ ಸುಂಕ ವಸೂಲಿ ಖಂಡನೀಯ. ಅನೇಕ ಬಾರಿ ಹೆದ್ದಾರಿ ಇಲಾಖೆಗೆ ಮನವಿ ಮಾಡಿದ್ದರೂ, ಪ್ರಯೋಜನವಾಗಿಲ್ಲ. ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಬೇಕಿದೆ. ಹರೀಶ್ ಪುತ್ರನ್ ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿ ಅಧ್ಯಕ್ಷ