ಜಿಪಂ ಸಿಇಒ ವಿರುದ್ಧ ಕ್ರಮಕ್ಕೆ ಆಗ್ರಹ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ

Protest against ZP CEO Mandya
Published on

ಮಂಡ್ಯ: ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಅವರು ಅಧಿಕಾರ ದುರುಪಯೋಗ ಮಾಡಿಕೊಂಡು ತಮ್ಮ ಅಧೀನ ಸಿಬ್ಬಂದಿ ಮೂಲಕ ಪ್ರತಿಭಟನೆ ನಡೆಸಿ ಹೋರಾಟಗಾರರ ಧ್ವನಿ ಅಡಗಿಸಲು ಹೊರಟಿದ್ದಾರೆ. ಆದ್ದರಿಂದ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಕಾರ್ಯಕರ್ತರು, ಸಿಇಒ ಅವರನ್ನು ವರ್ಗಾವಣೆ ಮಾಡುವಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆ.ಆರ್.ನಂದಿನಿ ಅವರು ಅಧಿಕಾರದಲ್ಲಿ ಯಾವುದೇ ಕಾರಣಕ್ಕೂ ಮುಂದುವರಿಯಬಾರದು. ಅಧಿಕಾರ ಮತ್ತು ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ಪ್ರತಿಭಟನೆ ನಡೆಸುವಂತೆ ಪ್ರಚೋದಿಸಿರುವ ಸಿಇಒ ಮತ್ತು ಉಪ ಕಾರ್ಯದರ್ಶಿ ಲಕ್ಷ್ಮೀ ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಕೂಡಲೇ ಕೂಲಿಕಾರರಿಗೆ ಕೆಲಸ ನೀಡಬೇಕು. ಬಾಕಿ ವೇತನ ಬಿಡುಗಡೆ ಮಾಡಬೇಕು. ಕಡಿಮೆ ಕೂಲಿ ಹಾಕಿರುವುದನ್ನು ಸರಿಪಡಿಸಿ ಸರಿಯಾದ ಕೂಲಿ ಪಾವತಿಸಬೇಕು. ಕೆಲಸಕ್ಕೆ ಅನಧಿಕೃತ ಗೈರಾಗಿ ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳು ಮತ್ತು ನೌಕರರ ಮೇಲೆಯೂ ಶಿಸ್ತು ಕ್ರಮ ಆಗಬೇಕು. ಅನುಮೋದನೆ ನೀಡದ 550 ನೌಕರರಿಗೆ ಕೂಡಲೇ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಯ ಕೆಂಪೂಗೌಡ, ಟಿ.ಎಲ್.ಕೃಷ್ಣೇಗೌಡ, ಭರತ್‌ರಾಜ್, ದೇವಿ, ಸಿ.ಕುಮಾರಿ, ಸಿದ್ದರಾಜು ಎಂ, ನ.ಲಿ.ಕೃಷ್ಣ, ಶಿವರಾಜ್, ಮಾದೇಶ್, ಚನ್ನಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net