

ಮಲೇಬೆನ್ನೂರು: ದಿಢೀರ್ ಆನ್ ಅಂಡ್ ಆಫ್ ಜಾರಿಗೊಳಿಸಿ ಭದ್ರಾ ಡ್ಯಾಂನಿಂದ ನಾಲೆಗೆ ಹರಿಸುವ ನೀರು ಬಂದ್ ಮಾಡುವ ನಿರ್ಧಾರ ಪ್ರಕಟಿಸಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ರೈತರು ಶನಿವಾರ ಮಲೇಬೆನ್ನೂರಿನ ನೀರಾವರಿ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮುಂಗಾರು ಹಂಗಾಮಿಗೆ ಭದ್ರಾ ನಾಲೆಯಲ್ಲಿ ನಿರಂತರ 100 ದಿನ ನೀರು ಹರಿಸುವುದಾಗಿ ಹೇಳಿ ಇದೀಗ ಇಂದಿನಿಂದಲೇ 10 ದಿನ ಬಂದ್ ಮಾಡಿ 20 ದಿನ ನೀರು ಹರಿಸುವ ನಿರ್ಧಾರ ಪ್ರಕಟಿಸಿರುವುದರಿಂದ ಭತ್ತದ ಬೆಳೆ ನಾಶವಾಗುವ ಸಾಧ್ಯತೆ ಇದ್ದು, ಸಾವಿರಾರು ರೂ.ಸಾಲ ಮಾಡಿ ಭತ್ತ ನಾಟಿ ಮಾಡಿದ್ದ ನಮಗೆ ವಿಷ ಕುಡಿಯುವ ಪರಿಸ್ಥಿತಿ ಬಂದಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
10 ದಿನ ನಾಲೆಯಲ್ಲಿ ನೀರು ಬಂದ್ ಮಾಡಿದರೆ ಜಮೀನಿಗೆ ನೀರು ಸಿಗುವ ವೇಳೆಗೆ 5ರಿಂದ 10 ದಿನ ಹೆಚ್ಚುವರಿ ತಗೆದುಕೊಳ್ಳುತ್ತದೆ. ಯಾವುದೇ ಭತ್ತದ ಬೆಳೆ 15ರಿಂದ 20 ದಿನ ನೀರಿಲ್ಲದಿದ್ದರೆ, ಸಂಪೂರ್ಣ ನಾಶವಾಗುವ ಸಂಭವವಿರುತ್ತದೆ. ನಾಲೆಗೆ ನೀರು ಬಂದ್ ಮಾಡುವುದಕ್ಕೂ ನಾಲ್ಕೈದು ದಿನ ಮುಂಚೆ ನಿರ್ಧಾರ ಪ್ರಕಟಿಸಿದ್ದರೆ, ಕಡೆ ಪಕ್ಷ ಬಂದ್ ಆಗುವ ಮುನ್ನ ಒಮ್ಮೆ ಗದ್ದೆಗೆ ನೀರು ಕಟ್ಟುತ್ತಿದ್ದೆವು. ಆದರೆ ದಿಢೀರ್ ಬಂದ್ ಮಾಡುವ ನಿರ್ಧಾರದಿಂದ, ಭತ್ತದ ಬೆಳೆ ಮತ್ತಷ್ಟು ಹೆಚ್ಚು ಒಣಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.
ದಾವಣಗೆರೆ ಜಿಲ್ಲೆಯ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ನಾಲೆಗೆ ನೀರು ಹರಿಸುವ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ಸಚಿವ ಮಧು ಬಂಗಾರಪ್ಪ ಜಿಲ್ಲೆಯ ಶಾಸಕರ ಅಭಿಪ್ರಾಯ ಪಡೆದು ಆನ್ ಅಂಡ್ ಆಫ್ ಪದ್ಧತಿ ಜಾರಿಗೊಳಿಸಿದರೆಯೇ ಎಂದು ಸ್ಪಷ್ಟನೆ ನೀಡಬೇಕು. ಜಿಲ್ಲೆಯ ಶಾಸಕರೂ ಈ ನಿರ್ಣಯದ ಪರ ವಿರೋಧದ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ರೈತರು ಒತ್ತಾಯಿಸಿದರು.
ರೈತ ಮುಖಂಡ ನಿಟ್ಟೂರಿನ ಬಿ.ಜಿ.ಧನಂಜಯ ಮಾತನಾಡಿ, ನಾಲೆಗೆ ಸಂಪೂರ್ಣ ನೀರು ಬಂದ್ ಮಾಡದೆ, ಪ್ರತಿದಿನ 650 ಕ್ಯೂಸೆಕ್ ನೀರು ಕಡಿಮೆ ಮಾಡಿ 2ಸಾವಿರ ಕ್ಯೂಸೆಕ್ ನೀರು ಹರಿಸಬೇಕು. ಯಾವುದೇ ಕಾರಣಕ್ಕೂ ನಾಲೆಗೆ ನೀರು ಬಂದ್ ಮಾಡಬಾರದು ಎಂದು ಒತ್ತಾಯಿಸಿದರು.
ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಲದ ಅಧ್ಯಕ್ಷ ವೈ.ದ್ಯಾವಪ್ಪರೆಡ್ಡಿ ಮಾತನಾಡಿ, ಡ್ಯಾಂನಿಂದ ಕಡಿಮೆ ನೀರನ್ನು ನಿರಂತರ ಹರಿಸುವಂತೆ ಐಸಿಸಿ ಸಭೆಯಲ್ಲಿ ನಾವು ಒತ್ತಾಯಿಸಿದ್ದೆವು. ಆದರೆ ಏಕಾಏಕಿ ಡ್ಯಾಂನಿಂದ 10 ದಿನ ನೀರು ನಿಲ್ಲಿಸುವ ನಿರ್ಣಯ ಪ್ರಕಟಿಸಿರುವುದರಿಂದ ಭತ್ತದ ಬೆಳೆಗೆ ಹಾನಿಯಾಗಲಿದೆ ಎಂದರು.
ರೈತ ಸಂಘದ ನಂದಿತಾವರೆ ಮುರಿಗೇಂದ್ರಯ್ಯ ಮಾತನಾಡಿ, ಯಾವುದೇ ಕಾರಣಕ್ಕೂ ಭದ್ರಾ ಡ್ಯಾಂನ ಗೇಟ್ ಹಾಕಬಾರದು. ಮೊದಲು ನುಡಿದಂತೆ ನಿರಂತರ 100 ದಿನ ನೀರು ಹರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಭದ್ರಾ ಡ್ಯಾಂ ಗೇಟ್ ಹಾಕದಂತೆ ಒತ್ತಾಯಿಸಲು ಪ್ರತಿಭಟನಾನಿರತ ರೈತರು, ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಲು ದಾವಣಗೆರೆಗೆ ತೆರಳಿದರು.
ವೈ.ದ್ಯಾವಪ್ಪರೆಡ್ಡಿ, ಹನುಮಂತಪ್ಪ, ಚಂದ್ರಶೇಖರಪ್ಪ, ಎಂ.ರವಿ, ರಮೇಶ್, ಧನಂಜಯ ಕೆಜಿ, ಕುಮಾರ್, ತ್ರಿಮೂರ್ತಿ, ಕರಿಬಸಯ್ಯ, ಮೆಹರ‌್ವಾಡಿ ಮತ್ತಿತರರು ಪಾಲ್ಗೊಂಡಿದ್ದರು.