

ಬೆಳಗಾವಿ: ‘ವಕ್ಫ್ ತಿದ್ದುಪಡಿ ಮಸೂದೆ-2024’ಯನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಸೋಷಿಯಲ್ ಡೆಮಾಕ್ರಾಟಿ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರವು ವಕ್ಫ್ ಬೋರ್ಡ್‌ಗೆ ಕರಾಳ ಕಾನೂನು ಜಾರಿಗೊಳಿಸಿದೆ. ಇದನ್ನು ಮುಸ್ಲಿಂ ಸಮುದಾಯ ಒಪ್ಪುವುದಿಲ್ಲ. ಮೊದಲೆಲ್ಲ ವಕ್ಫ್ ಬೋರ್ಡ್ ಆಸ್ತಿ ಕಬಳಿಸುವವರ ವಿರುದ್ಧ ಕ್ರಮಕೈಗೊಳ್ಳುವ ಕಾನೂನಿತ್ತು. ಆದರೀಗ ಅದನ್ನು ರದ್ದುಪಡಿಸಲಾಗುತ್ತಿದೆ. ಹೊಸ ವಿಧೇಯಕದಲ್ಲಿ ತಹಸೀಲ್ದಾರರು, ಸರ್ಕಾರಿ ಅಧಿಕಾರಿಗಳು ಭಾಗಿಯಾಗಬಾರದು. ವಕ್ಫ್‌ಗೆ ನಮ್ಮ ಪೂರ್ವಜರು ಆಸ್ತಿ ದಾನ ಮಾಡಿದ್ದಾರೆ. ಹೊಸ ಕಾನೂನು ಸ್ವಾಗತಿಸಿದ ಸಮುದಾಯದ ಶಾಸಕರು ಸಮುದಾಯಕ್ಕಾಗುವ ಅನ್ಯಾಯದ ವಿರುದ್ಧ ಧ್ವನಿ ಎತ್ತದೇ ದ್ರೋಹ ಮಾಡುತ್ತಿದ್ದಾರೆ. ವಕ್ಫ್ ಆಸ್ತಿಗೆ ಕನ್ನ ಹಾಕಿದರೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮೀತ್ ಶಾ ಹಾಗೂ ಆರ್‌ಎಸ್‌ಎಸ್ ಮುಖಂಡರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಎಚ್ಚರಿಸಿದರು.
ಬಾಬ್ರಿ ಸೇರಿ ಎಲ್ಲ ವಿವಾದಗಳಲ್ಲೂ ನ್ಯಾಯಾಲಯದ ದುರ್ಬಳಕೆ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಈ ಕಾನೂನು ಒಪ್ಪುವುದಿಲ್ಲ. ವಕ್ಫ್ ಕಾನೂನು ಅಲ್ಲಾಹನ ಸ್ವತ್ತಾಗಿದೆ. ಪೂರ್ವಜರು ಸಮುದಾಯದ ಏಳಿಗೆಗಾಗಿ ಈ ಸಂಪತ್ತನ್ನು ದಾನ ಮಾಡಿದ್ದಾರೆ. ಇದರ ಮೇಲೆ ಯಾರೂ ಹಕ್ಕು ಚಲಾಯಿಸುವಂತಿಲ್ಲ. ಹೊಸ ಕಾನೂನು ರದ್ದುಗೊಳಿಸದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು. ಕೇಂದ್ರ ಸರ್ಕಾರ ಈ ಕರಾಳ ಕಾನೂನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಮಾಜೀದ್ ಶೇಖ್, ಮೌಲಾನಾ ನೂರುದ್ದೀನ್ ಫಾರೂಕಿ, ಮಕ್ಸೂದ್ ಮಕಾಂದಾರ್, ಮಾಜಿದ್ ಶೇಖ್, ಇಸ್ಮಾಯಿಲ್ ಹೊನ್ನೂರು, ಇಮ್ರಾನ್ ಅತ್ತಾರ್, ರಿಜ್ವಾನ್ ಅತ್ತಾರ ಇತರರಿದ್ದರು.