ಅವೈಜ್ಞಾನಿಕ ವಾಹನ ಕಾಯ್ದೆ ವಿರೋಧಿಸಿ ಪ್ರತಿಭಟನೆ

Protest against unscientific vehicle act
ಅವೈಜ್ಞಾನಿಕ ಕಾಯ್ದೆ ಕೈ ಬಿಡಬೇಕೆಂದು ಆಗ್ರಹಿಸಿ ಹುನಗುಂದದಲ್ಲಿ ತಾಲೂಕು ಚಾಲಕರ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು. ರವಿ ಕರಂಡಿ, ಅಮರೇಶ ಬಂಡರಗಲ್ಲ, ರವಿ ಹೂಲಗೇರಿ ಇದ್ದರು.
Published on

ಹುನಗುಂದ: ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಸ್ತಾಪಿಸಿರುವ ವಾಹನ ಕಾಯ್ದೆ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿ ಲಾರಿ, ಟ್ರಕ್, ಆಟೋ ಸೇರಿ ಇನ್ನಿತರ ಚಾಲಕರು, ಮಾಲೀಕರು ಪಟ್ಟಣದ ವಿಜಯ ಮಹಾಂತೇಶ ವೃತ್ತದಲ್ಲಿನ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಬುಧವಾರ ಪ್ರತಿಭಟನೆ ನಡೆಸಿದರು.

ವಾಹನ ಚಾಲಕರ ಒಕ್ಕೂಟದ ಅಧ್ಯಕ್ಷ ಅಮರೇಶ ಬಂಡರಗಲ್ಲ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಜ.8 ರಂದು ಸಂಸತ್ತಿನಲ್ಲಿ ಚಾಲಕರ ವಿರುದ್ಧ ಅವೈಜ್ಞಾನಿಕ ಕಾಯ್ದೆ ಪಾಸು ಮಾಡಿದ್ದಾರೆ. ಚಾಲಕ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿದ್ದು ಅಪಘಾತ ಮಾಡಿದ ವ್ಯಕ್ತಿಯನ್ನು ಆಸ್ವತ್ರೆಗೆ ಸಾಗಿಸಬೇಕು. ಯಾವುದೇ ಕಾರಣಕ್ಕೆ ಮಾಹಿತಿ ನೀಡದೆ ಘಟನಾ ಸ್ಥಳದಿಂದ ಪರಾರಿ ಆಗುವಂತಿಲ್ಲ. ಅಲ್ಲಿಂದ ತಪ್ಪಿಸಿಕೊಂಡು ಹೋದರೆ ಚಾಲಕನಿಗೆ 10 ವರ್ಷ ಜೈಲು, 7 ಲಕ್ಷ ರೂ. ದಂಡ ವಿಧಿಸುವ ಕಾನೂನು ಜಾರಿಗೊಳಿಸುತ್ತಿದ್ದಾರೆ. ಅಲ್ಲದೆ ಅಪಘಾತ ಸಂದರ್ಭ ಸ್ಥಳದಲ್ಲಿ ಬಿಗುವಿನ ವಾತಾವರಣವಿರುವುದು. ಅಂತಹ ವೇಳೆ ಚಾಲಕ ಜನರ ಕೈಗೆ ಸಿಕ್ಕು ಚಾಲಕರನ್ನು ಕೊಂದಿರುವ ಘಟನೆಗಳೂ ನಡೆದಿವೆ. ಆದ್ದರಿಂದ ಇದೊಂದು ಚಾಲಕ ವಿರೋಧಿ ಕಾನೂನು ಆಗಲಿದೆ ಎಂದರು.

ಲಾರಿ ಚಾಲಕ ರವಿ ಕರಂಡಿ ಮಾತನಾಡಿ, ಯಾರೂ ಬೇಕಂತಲೇ ಅಪಘಾತ ಮಾಡುವುದಿಲ್ಲ. ಆಕಸ್ಮಿಕವಾಗಿ ಘಟಿಸುವ ಅಪಘಾತಕ್ಕೆ ಈಗಾಗಲೇ ಹಲವು ಕಾನೂನುಗಳಿದ್ದು, ಅದರ ಅಡಿಯಲ್ಲೇ ಇಷ್ಟು ವರ್ಷಗಳ ವಿಚಾರಣೆ, ತಪ್ಪು ಮಾಡಿದ್ದರೆ ನ್ಯಾಯಾಲಯ, ಪೊಲೀಸರಿಂದ ಶಿಕ್ಷೆ, ದಂಡ ವಿಧಿಸಿಕೊಂಡು ಬರಲಾಗುತ್ತಿದೆ. ಆದರೆ, ಈಗ ಹೊಸದಾಗಿ ಕಾನೂನು ಬಂದರೆ ಲಾರಿ, ಟ್ರಕ್, ಬಸ್, ಕಾರು, ಆಟೋ ಸೇರಿ ಯಾವ ವಾಹನಗಳಿಗೂ ಚಾಲಕರೇ ಸಿಗದಂತಾಗುತ್ತದೆ. ಇದರಿಂದ ಜನರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಈ ವಿಧೇಯಕವನ್ನು ಸರ್ಕಾರ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ದೇಶಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ಮಾಜಿ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿದರು.

ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ನಿಂಗಪ್ಪ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು. ಚಾಲಕರಾದ ಪ್ರಕಾಶ ಸಿಂಧೆ, ರಜಾಕ್ ರಶ್ಮಿ, ರವಿ ಹೂಲಗೇರಿ, ಐ.ಎನ್. ಟೆಂಗಿನಕಾಯಿ, ಮಹಬೂಬ್ ಮಾನ್ವಿ, ಯುಸ್ೂ ಭಾವಿಕಟ್ಟಿ, ರಫೀಕ್ ಭಾವಿಕಟ್ಟಿ, ಲಾಲ್‌ಸಾಬ ಗಡೇದ, ಮಹಾಂತೇಶ ಗೌಡರ, ಭಾಷಾ ಭಾವಿಕಟ್ಟಿ, ರಫೀಕ್ ಭಾವಿಕಟ್ಟಿ, ಯಮನೂರ ಹೊಸಮನಿ, ಸಮೀರ ಸುತಗುಂಡರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net