

ಇಳಕಲ್ಲ(ಗ್ರಾ): ಡಾ. ಅಂಬೇಡ್ಕರ್ ಕುರಿತು ಅವಹೇಳನಕಾರಿ ಮಾತಗಳನ್ನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಪಟ್ಟಣದ ಭೀಮ ಆರ್ಮಿ ಸಂಘಟನೆ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರಸಭೆ ಕಚೇರಿ ಹತ್ತಿರದ ಅಂಬೇಡ್ಕರ್ ಭವನದಿಂದ ಭೀಮ ಆರ್ಮಿ ಸಂಘಟನೆ ಸದಸ್ಯರು ಪ್ರತಿಭಟನಾ ಮೆರವಣಿಗೆಯಲ್ಲಿ ಅಂಬೇಡ್ಕರ್ ವೃತ್ತ, ಕಂಠಿ ವೃತ್ತ, ಬಸ್ ನಿಲ್ದಾಣ, ಎಸ್.ವಿ.ಎಂ. ಕಾಲೇಜ್, ಪ್ರವಾಸಿ ಮಂದಿರ, ಬಸವೇಶ್ವರ ವೃತ್ತ ಮಾರ್ಗವಾಗಿ ಮರಳಿ ಕಂಠಿ ವೃತ್ತಕ್ಕೆ ಆಗಮಿಸಿ ಅಲ್ಲಿ ಅಮಿತ್ ಷಾ ಭಾವಚಿತ್ರವನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ನವದೆಹಲಿಯ ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ ಅವರ ಕುರಿತು ಅಪಹಾಸ್ಯ ಮಾಡಿರುವುದು ಮತ್ತು ಭಾರತೀಯ ಸಂವಿಧಾನ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಕೂಡಲೇ ಕೇಂದ್ರ ಮಂತ್ರಿಗಳನ್ನು ವಜಾ ಮಾಡಿ ಈ ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಸತೀಶ ಕೂಡಲಗಿ ಅವರು ಮನವಿ ಸಲ್ಲಿಸಿದರು.
ಜೈ ಭೀಮ ಆರ್ಮಿ ಸಂಘಟನೆ ಅಧ್ಯಕ್ಷ ಮಹಾಂತೇಶ ನಾರಾಯಣಿ, ಸಂಘಟನೆಯ ಸದಸ್ಯರು, ಎಸ್‌ಡಿಪಿಐ ಸಂಘಟನೆ ಸದಸ್ಯರು ಮತ್ತು ದಲಿತ ಸಂಘಟನೆಗಳ ಮುಖಂಡರು ಇದ್ದರು.