ಸ್ಥಳೀಯ ವಾಹನಗಳಿಂದ ಟೋಲ್ ವಸೂಲಿ ಬೇಡ

24KMT2
Published on

ಕುಮಟಾ: ತಾಲೂಕಿನ ಹೊಳೆಗದ್ದೆಯಲ್ಲಿ ಚತುಷ್ಪಥ ಟೋಲ್​ನಲ್ಲಿ ಸ್ಥಳೀಯ ನೋಂದಣಿ ವಾಹನಗಳಿಗೆ ಶುಲ್ಕ ಆಕರಣೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಕುಮಟಾ ಹಾಗೂ ಹೊನ್ನಾವರದ ಟ್ಯಾಕ್ಸಿ ಚಾಲಕ-ಮಾಲೀಕರ ಒಕ್ಕೂಟ, ಟಿಪ್ಪರ್ ಯೂನಿಯನ್ ಇನ್ನಿತರ ಸಂಘಟನೆಗಳು ಪಾಲ್ಗೊಂಡಿದ್ದವು. ಟೋಲ್ ಬಳಿ ಐಆರ್​ಬಿ ಕಚೇರಿಯೆದುರು ಧರಣಿ ಕುಳಿತ ಪ್ರತಿಭಟನಾಕಾರರು ಚತುಷ್ಪಥ ಕಾಮಗಾರಿ ಪೂರ್ಣಗೊಳಿಸದೇ ಸ್ಥಳೀಯ ಕೆಎ-47 ನೋಂದಣಿ ವಾಹನಗಳಿಗೂ ದಬ್ಬಾಳಿಕೆಯಿಂದ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ತಹಸೀಲ್ದಾರ್ ಮೇಘರಾಜ ನಾಯ್ಕ ಸ್ಥಳಕ್ಕೆ ಬಂದು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರಾದರೂ ಶುಲ್ಕ ವಿನಾಯಿತಿ ಬಗ್ಗೆ ಅಧಿಕೃತ ಹೇಳಿಕೆ ನೀಡದೇ ಹೋದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ, ಬೇಕಾಬಿಟ್ಟಿಯಾಗಿ ಸಾರ್ವಜನಿಕರಿಂದ ಟೋಲ್ ವಸೂಲಿ ಮೂಲಕ ಅಕ್ರಮ ಮತ್ತು ಅನ್ಯಾಯ ಎಸಗುತ್ತಿರುವ ಐಆರ್​ಬಿ ಧೋರಣೆಗೆ ಸ್ಥಳೀಯ ಜನರ ಪರವಾಗಿ ನಿಲ್ಲಬೇಕಾದ ಜನಪ್ರತಿನಿಧಿಗಳು ಮೌನವಾಗಿದ್ದಾರೆ. ನಾವು ಕೂಡ ಟೋಲ್ ಕಟ್ಟುವುದಿಲ್ಲ. ದಯವಿಟ್ಟು ಕೆಎ-47 ನೋಂದಣಿಯವರು ಯಾರೂ ಹೊಳೆಗದ್ದೆ ಟೋಲ್ ನಲ್ಲಿ ಶುಲ್ಕ ಕೊಡಬೇಡಿ, ಕೇಳಿದರೆ ನಮಗೆ ತಿಳಿಸಿ, ನಾವು ನಿಮ್ಮೊಂದಿಗಿದ್ದೇವೆ. ಸುಂಕ ಕಟ್ಟಿಲ್ಲವೆಂದು ನಿಮ್ಮಮೇಲೆ ದೌರ್ಜನ್ಯ ಮಾಡುವ ಹಕ್ಕು ಟೋಲ್​ನವರಿಗೆ ಇಲ್ಲ ಎಂದರು.

ಸೂರಜ ನಾಯ್ಕ, ಕೃಷ್ಣಾನಂದ ವೆರ್ಣೆಕರ, ತಿಮ್ಮಪ್ಪ ನಾಯ್ಕ, ಕೃಷ್ಣ ಗೌಡ, ತುಕಾರಾಮ ನಾಯ್ಕ, ಅಶೋಕ ಗೌಡ, ಜಿ. ಎನ್. ಗೌಡ, ಜಿ.ಜಿ. ಶಂಕರ, ಡಿ.ಟಿ. ನಾಯ್ಕ, ಟ್ಯಾಕ್ಸಿ ಚಾಲಕ-ಮಾಲೀಕರ ಒಕ್ಕೂಟ, ಟಿಪ್ಪರ್ ಯೂನಿಯನ್ ಇನ್ನಿತರರು ಇದ್ದರು. ಟೋಲ್ ಬಳಿ ಹೆಚ್ಚಿನ ಪೊಲೀಸ್ ಬಂದೋಬಸ್ತ್್ತ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net