

ಮೈಸೂರು: ನಗರದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಚಿತ್ವ ಇಲ್ಲದೇ ಅವ್ಯವಸ್ಥೆಯಿಂದ ಕೂಡಿದೆ. ಇದನ್ನು ಪ್ರಶ್ನಿಸಿದರೆ ವೈದ್ಯರು ನಿರ್ಲಕ್ಷೃದಿಂದ ಮಾತನಾಡುತ್ತಾರೆ ಎಂದು ಆರೋಪಿಸಿ ಸಾರ್ವಜನಿಕರು ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಪಾರಂಪರಿಕ ಶೈಲಿಯಲ್ಲಿರುವ ಆಸ್ಪತ್ರೆಯ ಕಟ್ಟಡವನ್ನು ಸರಿಯಾಗಿ ಇಟ್ಟುಕೊಂಡಿಲ್ಲ. ಶೌಚಗೃಹ ದುರ್ವಾಸನೆ ಬೀರುತ್ತಿದ್ದು, ರೋಗಿಗಳು ತೊಂದರೆ ಅನುಭವಿಸುವಂತಾಗಿದೆ. ಸುತ್ತ ಮುತ್ತಲ ಪ್ರದೇಶದಲ್ಲಿ ಇರುವ ಖಾಲಿ ಜಾಗದಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದರೂ ಅದನ್ನು ತೆರವುಗೊಳಿಸಿಲ್ಲ. ಇದರಿಂದ ಸೊಳ್ಳೆ ಕಾಟ ಹೆಚ್ಚಾಗಿದೆ ಎಂದು ದೂರಿದರು.
ಆಸ್ಪತ್ರೆ ವೈದ್ಯರಾದ ಡಾ.ವರಲಕ್ಷ್ಮಿಅವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈ ಕುರಿತು ಪ್ರಶ್ನಿಸಿದರೆ ದುರ್ವತನೆ ತೋರುತ್ತಾರೆ. ರೋಗಿಗಳಿಗೆ ಸರಿಯಾಗಿ ಚಿಕಿತ್ಸೆಯನ್ನೂ ನೀಡುವುದಿಲ್ಲ. ಆದ್ದರಿಂದ ವೈದ್ಯರನ್ನು ಬದಲಿಸಿ, ಆಸ್ಪತ್ರೆ ಸ್ವಚ್ಛಗೊಳಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕುಮಾರಸ್ವಾಮಿ ಅವರು, ವೈದ್ಯಾಧಿಕಾರಿ ಮಹಾಲಕ್ಷ್ಮಿ ಅವರನ್ನು ವರ್ಗಾಯಿಸಿ ಬದಲಿ ವೈದ್ಯರನ್ನು ನೇಮಿಸಲಾಗುವುದು. ಅಲ್ಲದೇ ವಾರದ ಒಳಗೆ ಆರೋಗ್ಯ ಕೇಂದ್ರ ಸ್ವಚ್ಛತೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು.
ಮುಖಂಡರಾದ ಜಿ ರಾಘವೇಂದ್ರ, ಕಿಶೋರ್ ಕುಮಾರ್, ಸಚಿನ್, ಚರಣ್, ಗೋಪಾಲಕೃಷ್ಣ, ವಿನೋದ್‌ಅರಸ್, ಮಂಜುನಾಥ್, ವೆಂಕಟೇಶ್ ಇತರರು ಇದ್ದರು.