

ರಟ್ಟಿಹಳ್ಳಿ: ಬೆಳಗಾವಿ ಸುವರ್ಣಸೌಧದ ಸಮೀಪ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ 2ಎ ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಲಿಂಗಾಯತ ಪಂಚಮಸಾಲಿ ಸಮುದಾಯದ ಜನರ ಮೇಲೆ ಸರ್ಕಾರದ ಆದೇಶದಂತೆ ಪೊಲೀಸರು ಲಾಠಿಚಾರ್ಜ್ ಮಾಡಿ ದೌರ್ಜನ್ಯ ಎಸಗಿದ್ದಾರೆ. ಈ ಘಟನೆ ಖಂಡಿಸಿ ರಟ್ಟಿಹಳ್ಳಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಸರ್ಕಾರದ ವಿರುದ್ಧ ಡಿ. 12ರಂದು ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ತಾಲೂಕು ಅಧ್ಯಕ್ಷ ಪರಮೇಶ್ವರಪ್ಪ ಹಲಗೇರಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಲಿಂಗಾಯತ ಪಂಚಮಸಾಲಿ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆದೇಶದಂತೆ ಸಮಾಜದ ಸುಮಾರು 2 ಲಕ್ಷಕ್ಕೂ ಹೆಚ್ಚು ಜನರು 2ಎ ಮೀಸಲಾತಿಗೆ ಒತ್ತಾಯಿಸಿ ಬೆಳಗಾವಿ ಸುರ್ವಣಸೌಧದ ಬಳಿ ಸಮಾವೇಶ ಆಯೋಜಿಸಿ, ಮನವಿ ಸಲ್ಲಿಸಲು ಹೋಗುವ ಸಂದರ್ಭದಲ್ಲಿ ಪ್ರತಿಭಟನಕಾರರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಸಮಾಜದ ಬೇಡಿಕೆಗೆ ಸ್ಪಂದಿಸಿದೆ ಅಗೌರವ ತೋರಿ, ಅಹಿತಕರ ಘಟನೆಗೆ ಕಾರಣರಾಗಿದ್ದಾರೆ. ಈ ಘಟನೆಯನ್ನು ಸಮಾಜದಿಂದ ತೀವ್ರವಾಗಿ ಖಂಡಿಸಿ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಬ್ರಹತ್ ಪ್ರಮಾಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬಳಿಕ ತಹಸೀಲ್ದಾರ್ಗೆ ಮನವಿ ಸಲ್ಲಿಸಲಾಗುತ್ತಿದೆ. ಸಮಾಜ ಬಾಂಧವರು ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.
ಮಾಲತೇಶ ಬೆಳಕೇರಿ, ಮಲ್ಲಿಕಾರ್ಜುನ ಪೂಜಾರ, ರಾಘವೇಂದ್ರ ಹರವಿಶೆಟ್ಟರ್, ರಾಜುಗೌಡ ಪಾಟೀಲ, ಶಂಕ್ರಗೌಡ ಕರೇಗೌಡ್ರು, ಕರಬಸಪ್ಪ ಬಳ್ಳಾರಿ, ನಾಗರಾಜ ತೋಟದ, ಗಿರೀಶ ಪೂಜಾರ, ರುದ್ರೇಶ ಧನ್ನೂರು ಇತರರು ಇದ್ದರು.