

ಸಿದ್ದಾಪುರ: ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧ ಕೇಂದ್ರಗಳನ್ನು ಮುಚ್ಚಲು ತೀರ್ಮಾನ ಕೈಗೊಂಡಿರುವ ರಾಜ್ಯ ಸರ್ಕಾರದ ತೀರ್ಮಾನ ಖಂಡಿಸಿ ಸಿದ್ದಾಪುರ ಬಿಜೆಪಿ ಶಕ್ತಿ ಕೇಂದ್ರದಿಂದ ಶುಕ್ರವಾರ ಸಿದ್ದಾಪುರ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಜನೌಷಧ ಕೇಂದ್ರದ ಮುಂದೆ ಮೌನ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಕೇಂದ್ರ ಸರ್ಕಾರದ ಬಡವರ ಏಳಿಗೆಗಾಗಿ ಹಾಗೂ ಬಡ ರೋಗಿಗಳ ಅನುಕೂಲಕ್ಕಾಗಿ ಕಡಿಮೆ ಬೆಲೆಯಲ್ಲಿ ಔಷಧಗಳನ್ನು ನೀಡಲು ದೇಶದಾದ್ಯಂತ ಜನೌಷಧ ಕೇಂದ್ರಗಳನ್ನು ತೆರೆದಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರವು ಆಸ್ಪತ್ರೆ ಆವರಣದಲ್ಲಿರುವ ಜನೌಷಧ ಕೇಂದ್ರಗಳನ್ನು ಮುಚ್ಚಲು ಹೊರಟಿರುವುದು ಸೇಡಿನ ರಾಜಕೀಯವಾಗಿದೆ ಎಂದು ಕಿಡಿಕಾರಿದರು.
ಸೇಡಿನ ರಾಜಕೀಯವನ್ನು ಬಡವರ ಮೇಲೆ ರಾಜ್ಯ ಸರ್ಕಾರ ಪ್ರಯೋಗ ಮಾಡುತ್ತಿದೆ. ರಾಜ್ಯ ಸರ್ಕಾರದ ನಿರ್ಧಾರವನ್ನು ಭಾರತೀಯ ಜನತಾ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ರಾಜ್ಯ ಸರ್ಕಾರವು ಆಸ್ಪತ್ರೆ ಆವರಣದಲ್ಲಿರುವ ಜನೌಷಧ ಕೇಂದ್ರವನ್ನು ಮುಚ್ಚುವ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಭಾರತೀಯ ಜನತಾ ಪಕ್ಷವು ಮುಂದಿನ ದಿನಗಳಲ್ಲಿ ಉಗ್ರ ರೀತಿಯಲ್ಲಿ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ಶಕ್ತಿ ಕೇಂದ್ರದ ಅಧ್ಯಕ್ಷ ರೂಪೇಶ್, ಜಿಲ್ಲಾ ಉಪಾಧ್ಯಕ್ಷ ಕಾಂಗೇರ ಸತೀಶ್, ಪ್ರಮುಖರಾದ ಅನಿಲ್ ಶೆಟ್ಟಿ, ಸೂದನ ಸತೀಶ್, ಹರಿದಾಸ್, ಪ್ರಭು ಶೇಖರ್ ಮತ್ತಿತರರು ಇದ್ದರು.