

ಗಜೇಂದ್ರಗಡ: ರೈತರಿಗೆ ಪೂರಕವಾಗಿದ್ದ ಹಲವು ಯೋಜನೆಗಳನ್ನು ರದ್ದುಗೊಳಿಸಿದ ರಾಜ್ಯ ಸರ್ಕಾರ ಧೋರಣೆ ಖಂಡಿಸಿ ಸೆ.8 ರಂದು ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಾಜಣ್ಣ ಕುಲಕರ್ಣಿ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ 51 ಲಕ್ಷ ರೈತರಿಗೆ ವಾರ್ಷಿಕವಾಗಿ ಕೇಂದ್ರದಿಂದ 6 ಸಾವಿರ ಹಾಗೂ ಹಿಂದಿನ ಬಿಜೆಪಿ ಸರ್ಕಾರದಲ್ಲಿ 4 ಸಾವಿರ ರೂ. ಲಭಿಸುತ್ತಿತ್ತು. ರೈತರ ಫಸಲಿಗೆ ಉತ್ತಮ ಬೆಲೆ ಸಿಗಲೆಂಬ ಉದ್ದೇಶದಿಂದ ಜಾರಿಗೆ ತಂದಿದ್ದ ಎಪಿಎಂಸಿ ಕಾಯ್ಕೆ, ಶ್ರಮಶಕ್ತಿ, ರೈತ ವಿದ್ಯಾ ನಿಧಿ ಸೇರಿದಂತೆ ಇತರೆ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ತಡೆ ಹಿಡಿದಿದೆ’ ಎಂದರು.
ಮಾಜಿ ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ರೈತರ ಕೊಳವೆ ಬಾವಿಗಳಿಗೆ 7 ಗಂಟೆ ತ್ರೀಪೇಸ್ ವಿದ್ಯುತ್ ಪೂರೈಕೆ ಮಾಡುವುದರ ಜತೆಗೆ ಸುಟ್ಟ ವಿದ್ಯುತ್ ಪರಿವರ್ತಕಗಳನ್ನು 24 ಗಂಟೆ ಒಳಗಾಗಿ ಬದಲಾಯಿಸಲಾಗುತ್ತಿತ್ತು. ಆದರೆ, ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದ್ದು, ಸುಟ್ಟ ವಿದ್ಯುತ್ ಪರಿವರ್ತಕಗಳ ಬದಲಾವಣೆಗೆ ತಿಂಗಳುಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
‘ನಾನು ಶಾಸಕನಾದರೆ 24*7 ವಿದ್ಯುತ್ ಕೊಡಿಸುತ್ತೇನೆ ಎಂದು ಭರವಸೆ ನೀಡಿ ಆಯ್ಕೆಯಾದ ಶಾಸಕರು ಈಗ ಎಲ್ಲಿದ್ದಾರೆ’ ಎಂದು ಪ್ರಶ್ನಿಸಿದರು.
ಬಾಳಾಜಿರಾವ್ ಬೋಸಲೆ ಮಾತನಾಡಿದರು. ಮುತ್ತು ಕಡಗದ, ಉಮೇಶ ಮಲ್ಲಾಪೂರ, ನೀಲಪ್ಪ ಗುರಿಕಾರ, ಬುಡ್ಡಪ್ಪ ಮೂಲಿಮನಿ, ಮಲ್ಲು ಕುರಿ ಇದ್ದರು.