

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದನ್ನು ಖಂಡಿಸಿ ಭಾರತೀಯ ಜನತಾ ಪಕ್ಷದ ಮಹಾನಗರ ಜಿಲ್ಲಾ ಘಟಕ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಈಗಾಗಲೇ ರಾಜ್ಯದ ಜನರು ಕಾಂಗ್ರೆಸ್ ಗ್ಯಾರಂಟಿ ಹಾಗೂ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಮತ್ತೆ ತೈಲ ಬೆಲೆ ಏರಿಸಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯ ಸರ್ಕಾರ ಮೋಸದ ಗ್ಯಾರಂಟಿಗಳಿಂದ ಅಧಿಕಾರ ನಡೆಸುತ್ತಿದ್ದು, ಎಲ್ಲ ಮೂಲಗಳಿಂದಲೂ ಹಣ ಲಪಟಾಯಿಸಲು ಮುಂದಾಗಿದೆ ಎಂದು ದೂರಿದ ಕಾರ್ಯಕರ್ತರು ತೆಂಗಿನ ಚಿಪ್ಪು ಪ್ರದರ್ಶಿಸಿ ಅಸಮಾಧಾನ ಹೊರಹಾಕಿದರು.
ರಾಜ್ಯ ಸರ್ಕಾರ ಕೂಡಲೇ ಬೆಲೆ ಏರಿಕೆ ಹಿಂಪಡೆಯಬೇಕು. ಇಲ್ಲವಾದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು. ಈ ವಿಷಯವಾಗಿ ರಾಜ್ಯಪಾಲರು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಿ ಜನರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ರವಾನಿಸಿದರು.
ನಂತರ ಬೈಕ್ ತಳ್ಳುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಶಾಸಕಿ ಸೀಮಾ ಮಸೂತಿ, ಮುಖಂಡರಾದ ನಿಂಗಪ್ಪ ಸುತಗಟ್ಟಿ, ಸಂಜಯ ಕಪಟಕರ, ವಿಜಯಾನಂದ ಶೆಟ್ಟಿ, ದತ್ತಮೂತಿರ್ ಕುಲಕಣಿರ್, ಶಿವು ಮೆಣಸಿನಕಾಯಿ, ಈರಣ್ಣ ಜಡಿ, ಬಸವರಾಜ ಗರಗ, ಮೋಹನ ರಾಮದುರ್ಗ, ಸುರೇಶ ಬೆದರೆ, ಪ್ರಭು ನವಲಗುಂದಮಠ, ಆನಂದ ಯಾವಗಲ, ಶಂಕರ ಶೇಳಕೆ, ಮಹೇಶ ಹೊರಡಿ, ಶಿವಾಜಿ ಶಿಂಧೆ, ಉದಯ ಯಂಡಿಗೇರಿ, ಬಸವರಾಜ ಕುಂದಗೋಳಮಠ, ವೆಂಕಟೇಶ ಕಾಟವೆ, ದೀಪಕ ಜಿತೂರಿ, ಸಚಿನ್ ಕಾಟವೆ, ಮಂಜು ಊಟವಾಲೆ, ಕುಶಾಲ ಪವಾರ್, ಪ್ರಮೋದ ಕಾರಕೂನ, ಶ್ರೀನಿವಾಸ ಕೋಟ್ಯಾನ, ಶೋಭಾ ಬುಜಂಗನವರ, ಪುಷ್ಪಾ ವಕಾಟಕರ, ಪುಷ್ಪಾ ನವಲಗುಂದ, ಅಶ್ವಿನಿ ವೀರಾಪುರ, ರೂಪಾ ಚೌಧರಿ, ಇತರರು ಇದ್ದರು.