ಜನಿವಾರ ತೆಗೆಸಿದ್ದನ್ನು ವಿರೋಧಿಸಿ ಪ್ರತಿಭಟನೆ

Sirsi strike
Published on

ಶಿರಸಿ: ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆ ವಿರೋಧಿಸಿ ನಗರದಲ್ಲಿ ಮಂಗಳವಾರ ಬ್ರಹತ್ ಪ್ರತಿಭಟನೆ ನಡೆಸಲಾಯಿತು.

ಸ್ವರ್ಣವಲ್ಲೀ ಮಠ, ವಾದಿರಾಜ ಮಠ, ಸಿದ್ದಾಪುರದ ನೆಲೆಮಾಂವು ಮಠ ಮತ್ತು ಜೀವಜಲ ಕಾರ್ಯಪಡೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಸಭಾ ಉತ್ತರ ಕನ್ನಡ ಘಟಕದ ಆಶ್ರಯದಲ್ಲಿ ಕರೆದಿದ್ದ ಖಂಡನಾ ಸಭೆಯಲ್ಲಿ ಎರಡು ಸಾವಿರಕ್ಕೂ ಅಧಿಕ ಜನ ಪಾಲ್ಗೊಂಡು ಜನಿವಾರ ತೆಗೆಸಿರುವ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಜರುಗಿದ ವಿಪ್ರ ಸಮಾಜದ ಖಂಡನಾ ಸಭೆಗೆ ಚಾಲನೆ ನೀಡಿ ಮಾತನಾಡಿದ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್, ಜನಿವಾರಕ್ಕೆ ತನ್ನದೇ ಆದ ಸಂಸ್ಕಾರ, ಸಂಸ್ಕೃತಿಯಿದೆ. ರಾಜ್ಯದಲ್ಲಿ ಹಿಂದುಗಳ ಮೇಲೆ, ಅವರ ನಂಬಿಕೆಗಳ ಮೇಲೆ ದೌರ್ಜನ್ಯ ನಡೆಸುವಿಕೆ ವ್ಯವಸ್ಥಿತವಾಗಿ ನಡೆದಿದೆ. ಕಾಂಗ್ರೆಸ್ ಸರ್ಕಾರ ಇದರ ಹಿಂದಿದ್ದು, ಬ್ರಾಹ್ಮಣರನ್ನು ಹೆದರಿಸುವ ಉದ್ದೇಶ ಸಫಲವಾಗುವುದಿಲ್ಲ. ಹಿಜಾಬ್ ಗಲಾಟೆ ಆದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ಖಂಡನೆ ಹೇಳಿಕೆ ನೀಡಿದ್ದರು. ಜನಿವಾರ ಪ್ರಕರಣಗಳು ನಡೆದಾಗ ನಾಲ್ಕು ದಿನಗಳ ನಂತರ ಮಾತನಾಡಿದ್ದಾರೆ. ಹಿಂದು ಧರ್ಮಕ್ಕೆ ಅವಮಾನ ಮಾಡುವ ಕಾರ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿಸುತ್ತಿದ್ದಾರೆ ಎಂಬ ಅನುಮಾನವಿದೆ. ವಿದ್ಯಾರ್ಥಿಗಳ ನೈತಿಕತೆಯನ್ನು ಕುಗ್ಗಿಸುವ ಕೆಲಸ ರಾಜ್ಯ ಸರ್ಕಾರದಿಂದಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಸಂಸ್ಕೃತಿಯನ್ನು ಎಂದಿಗೂ ಮುಸ್ಲಿಂ, ಕ್ರಿಶ್ಚಿಯನ್ ರಿಗೆ ಹೋಲಿಸುವುದು ಬೇಕಾಗಿಲ್ಲ. ಗೋ ಹಂತಕರನ್ನು ಪಕ್ಕದಲ್ಲಿ ಕೂರಿಸಿಕೊಂಡು ಸರ್ವಧರ್ಮ ಸಮ್ಮೇಳನ ಮಾಡುವುದನ್ನು ನಿಲ್ಲಿಸಬೇಕು. ಬ್ರಾಹ್ಮಣ್ಯಕ್ಕೆ ಅವಮಾನ ವಾದರೆ ಶಸ್ತ್ರ ಹಾಗೂ ಹಾಗೂ ಶಾಸ್ತ್ರದೊಂದಿಗೆ ಹೋರಾಟ ಮಾಡುತ್ತೇವೆ ಎಂದರು.

ವಿ.ಉಮಾಕಾಂತ ಭಟ್ ಕೆರೆಕೈ ಮಾತನಾಡಿ, ಯಜ್ಞೋಪವೀತ ತತ್ವಗಳ ಹಂದರ. ಎಲ್ಲರಿಗೂ ಬಲ ಬೇಕು. ಬ್ರಾಹ್ಮಣರು ತಲೆ ಎತ್ತಬೇಕು. ಉಪವೀತ ಧಾರಣಿಗಳು ಯಾರು ಹಿಂದೆ ಸರಿಯಬಾರದು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಮಾತನಾಡಿ, ಬ್ರಾಹ್ಮಣರ ತಂಟೆಗೆ ಬಂದರೆ ಏನಾಗುತ್ತದೆ ಎಂಬುದನ್ನು ನಾವು ತೋರಿಸಬೇಕಿದೆ. ಸಂಘಟಿತರಾಗಿ ಬೆಳೆದರೆ, ನಮ್ಮನ್ನು ಎದುರಿಸುವ ತಾಕತ್ತು ಯಾರಿಗೂ ಇಲ್ಲ ಎಂದರು.

ಪ್ರಮುಖರಾದ ಎಂ.ಎಂ. ಭಟ್, ನಿರ್ಮಲಾ ಕರ್ಕಿ, ಶ್ರೀಪಾದ ರಾಯ್ಸದ್, ಕೆ.ವಿ. ಭಟ್, ಜಿ.ಆರ್. ಹೆಗಡೆ, ರಮಾಕಾಂತ ಭಟ್, ವೇದಾ ನೀರ್ನಳ್ಳಿ ಇದ್ದರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು. ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಬ್ರಾಹ್ಮಣ ಸಂಘಗಳ ಮುಖಂಡರು, ಮಠಗಳ ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net