

ಮೈಸೂರು: ಮತದಾನ ಮಾಡಿ ಸದೃಢ ಭಾರತ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ಮನವಿ ಮಾಡಿದರು.
ಜಿಲ್ಲಾ ಸ್ವೀಪ್ ಕಾರ್ಯಕ್ರಮದಡಿ ಶುಕ್ರವಾರ ಭಾರತೀಯ ಆಹಾರ ಸಂಶೋಧನಾ ಕೇಂದ್ರ(ಸಿಎಫ್‌ಟಿಆರ್‌ಐ)ದ ಆವರಣದಲ್ಲಿ ಸಿಬ್ಬಂದಿ ಶುಕ್ರವಾರ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಡ್ಡಾಯ ಮತದಾನದ ಬಗ್ಗೆ ಪ್ರಮಾಣ ವಚನ ಬೋಧಿಸಿದ ಬಳಿಕ ಮಾತನಾಡಿದ ಅವರು, ನಗರ ಪ್ರದೇಶದ ಜನರು ಹೆಚ್ಚಾಗಿ ಮತದಾನ ಮಾಡುವುದಿಲ್ಲ ಎಂದು ಆರೋಪಗಳನ್ನು ದೂರ ಮಾಡಲು ಈ ಬಾರಿ ನಗರ ಪ್ರದೇಶದ ವಿದ್ಯಾವಂತ ಮತದಾರರು ಹೆಚ್ಚಾಗಿ ಮತದಾನ ಮಾಡಬೇಕು ಎಂದರು.
ಕೇಂದ್ರ ಚುನಾವಣಾ ಆಯೋಗವು ಪ್ರತಿ ಚುನಾವಣೆಯಲ್ಲೂ ಸುಧಾರಣೆ ಮಾಡಿ ಮತದಾನ ಮಾಡಲು ಸುಲಭ ಮಾಡಿದೆ. ಸರ್ಕಾರಿ ನೌಕರರಲ್ಲಿ ಮತದಾನ ಕಡಿಮೆಯಾಗಿದೆ. ಈ ಬಾರಿ ಎಲ್ಲರೂ ಹೆಚ್ಚಾಗಿ ಮತದಾನ ಮಾಡಿ ಸದೃಢ ಭಾರತ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.
ಸಿಎಫ್‌ಟಿಆರ್‌ಐ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣ ಸಿಂಗ್ ಮಾತನಾಡಿ, ಮತದಾನ ಕೇಂದ್ರ ದೂರವಿದೆ ಎಂದು ಮತದಾನ ಮಾಡದೆ ಮತ ವಂಚನೆ ಮಾಡಿಕೊಳ್ಳಬೇಡಿ. ಗ್ರಾಮೀಣ ಪ್ರದೇಶಗಳಿಗಿಂತ ಈ ಬಾರಿ ನಗರ ಪ್ರದೇಶದ ಜನರು ಹೆಚ್ಚು ಮತದಾನ ಮಾಡಿ ನಮ್ಮ ಕರ್ತವ್ಯವನ್ನು ನಿಭಾಯಿಸೋಣ ಎಂದು ಸಲಹೆ ನೀಡಿದರು.
ಸಿಎಫ್‌ಟಿಆರ್‌ಐ ಆಡಳಿತಾಧಿಕಾರಿ ಬಿ.ಎಸ್.ರಾಮಪ್ರಸಾದ್, ಸ್ವೀಪ್ ಸಹಾಯಕ ನೋಡಲ್ ಅಧಿಕಾರಿ ಶಾಂತಾ, ತೋಟಗಾರಿಕೆ ಇಲಾಖೆಯ ರುದ್ರೇಶ್, ನಗರ ಪಾಲಿಕೆ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.