

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಸತ್‌ನ ಉಭಯ ಸದನಗಳ 146 ಸಂಸದರನ್ನು ಅಮಾನತು ಮಾಡಿದ್ದನ್ನು ಖಂಡಿಸಿ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಬಿಜೆಪಿ ಸರ್ಕಾರದ ನಡೆ ಖಂಡಿಸಿ ಕಲಾಭವನದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿ ಎದುರು ಕೆಲ ಹೊತ್ತು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಸಂಸತ್ತಿನ ಮೇಲೆ ದಾಳಿಯಾದಾಗ ಭದ್ರತೆ ಬಗ್ಗೆ ಪ್ರಶ್ನಿಸಿದ 146 ಸಂಸದರನ್ನು ಸದನಗಳಿಂದ ಚಳಿಗಾಲ ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಿರುವುದು ಖಂಡನೀಯ. ಸಂಸತ್ತಿನ ಇತಿಹಾಸದಲ್ಲೇ ಯಾವ ಸರ್ಕಾರಗಳು ಇಂತಹ ಅಸಂವಿಧಾನ ನಡೆ ಅನುಸರಿಸಿಲ್ಲ. ಪ್ರಧಾನಮಂತ್ರಿ, ಗೃಹಮಂತ್ರಿ ಸೇರಿ ಯಾರೊಬ್ಬರೂ ಭದ್ರತಾ ಲೋಪ ಕುರಿತು ಸದನದಲ್ಲಿ ಉತ್ತರಿಸದಿರುವುದನ್ನು ಖಂಡಿಸಿದರು.
ಸದನಗಳಲ್ಲಿ ಯಾರೂ ಪ್ರಶ್ನಿಸಬಾರದು ಎಂಬ ದುರಾಲೋಚನೆಯಿಂದ ಬಿಜೆಪಿಯು ಪ್ರಜಾಪ್ರಭುತ್ವದ ಮೌಲ್ಯಗಳ ಕತ್ತು ಹಿಸುಕಿರುವುದನ್ನು ಇಡೀ ಪ್ರಪಂಚ ಖಂಡಿಸುತ್ತಿದೆ. ದೇಶದ ನಾಗರಿಕರು ತಲೆತಗ್ಗಿಸುವಂತಾಗಿದೆ. ಸಂಸತ್ತಿನ ಭದ್ರತಾ ವ್ಯವಸ್ಥೆ ಬಗ್ಗೆ ಪ್ರಶ್ನಿಸುವುದು ಸದಸ್ಯರ ಕರ್ತವ್ಯ. ಸಂಸದರು ತಮ್ಮ ಕರ್ತವ್ಯ ಮಾಡಿದ್ದರೂ ಅಮಾನತು ಮಾಡಿರುವುದು ಮತ್ತು ಕೇಂದ್ರ ಸರ್ಕಾರ ವಿರೋಧ ಪಕ್ಷದ ಅನುಪಸ್ಥಿತಿಯಲ್ಲಿ ಪ್ರಮುಖ ಬಿಲ್‌ಗಳನ್ನು ಪಾಸ್ ಮಾಡುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬೆಚ್ಚಿ ಬೀಳಿಸಿದೆ ಎಂದು ದೂರಿದರು.
ಕೂಡಲೇ ಮಧ್ಯಪ್ರವೇಶಿಸಿ ಕೇಂದ್ರ ಸರ್ಕಾರದ ತಪ್ಪು ನಡೆಗಳನ್ನು ತಿದ್ದುಕೊಳ್ಳಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪುರಿ, ಪಾಲಿಕೆ ಮಾಜಿ ಸದಸ್ಯ ದೀಪಕ ಚಿಂಚೋರೆ, ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಪ್ರಧಾನ ಕಾರ್ಯದರ್ಶಿ ನವೀದ ಮುಲ್ಲಾ, ಬ್ಲಾಕ್ ಅಧ್ಯಕ್ಷ ಬಸವರಾಜ ಕಿತ್ತೂರ, ಜೇಮ್ಸ್ ಯಾಮಾ, ಆನಂದ ಜಾಧವ, ಸುರೇಖಾ ಪೂಜಾರ, ಗೌರಿ ನಾಡಗೌಡ, ರೇಖಾ ಮೋರೆ, ಪಾಲಿಕೆ ಸದಸ್ಯರು, ಇತರರು ಇದ್ದರು.