ಮಣಿಪುರ ಘಟನೆಗೆ ಖಂಡನೆ: ನಗರದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

1 (1)
Published on

ಮಂಡ್ಯ: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಖಂಡಿಸಿ ನಗರದಲ್ಲಿ ಮಂಗಳವಾರ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.

ಸರ್ ಎಂ.ವಿ ಪ್ರತಿಮೆ ಎದುರು ಜಮಾಯಿಸಿದ ಸಿಐಟಿಯು, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ ಕಾರ್ಯಕರ್ತರು ‘ಜು.25 ಒಗ್ಗಟ್ಟಿನ ದಿನ ಮಣಿಪುರದ ಜನತೆಯೊಟ್ಟಿಗೆ ನಾವಿದ್ದೇವೆ’ ಎಂಬ ಘೋಷವಾಕ್ಯದಡಿ ಪ್ರತಿಭಟಿಸಿ ಪ್ರಧಾನಮಂತ್ರಿ ನರೇಂದ್ರಮೋದಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಭಾರತದ ಘನತೆಯನ್ನು ಜಗತ್ತಿನ ಮುಂದೆ ನಾಶಗೊಳಿಸಿದೆ. ಇದರಿಂದ ನಾವೆಲ್ಲರೂ ತಲೆತಗ್ಗಿಸಿ ನಿಲ್ಲುವಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೌನ ಬೆಂಬಲದೊಂದಿಗೆ ನಡೆಯುತ್ತಿರುವ ಹಿಂಸಾಚಾರದಲ್ಲಿ ನಲುಗಿರುವ ಮಣಿಪುರದ ಜನತೆ ಅತ್ಯಾಚಾರಕ್ಕೊಳಗಾದ ಮಹಿಳೆಯರ ಜತೆ ನಾವೆಲ್ಲರೂ ನಿಲ್ಲಬೇಕಿದೆ. ಮಣಿಪುರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ಸರ್ಕಾರದ ಕುಮ್ಮಕ್ಕಿನಿಂದ ನಡೆಯುತ್ತಿರುವ ದೌರ್ಜನ್ಯ ಇದಾಗಿದ್ದು, ಅಲ್ಲಿನ ಬಿಜೆಪಿ ಸರ್ಕಾರ ಬಹುಸಂಖ್ಯಾತರನ್ನು ಓಲೈಸಲು ರಾಜಕೀಯ ಉದ್ದೇಶದಿಂದ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ. ಅಲ್ಲಿ ಹಿಂಸಾಚಾರ ತಾಂಡವವಾಡುತ್ತಿದ್ದರೂ, ಪ್ರಧಾನಿ ಮೌನ ವಹಿಸಿರುವುದು,ಹಿಂಸಾಚಾರಕ್ಕೆ ಬೆಂಬಲ ನೀಡಿದಂತಿದೆ. ಅವರ ಈ ನಡೆ ಖಂಡನೀಯ ಎಂದು ಪ್ರತಿಭಟನಾಕಾರರ ಆಕ್ರೋಶ ಹೊರಹಾಕಿದರು.

ಮಣಿಪುರದ ಬಿಜೆಪಿ ಸರ್ಕಾರ ಮತ್ತು ಕೇಂದ್ರದ ಎನ್‌ಡಿಎ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕು. ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆ ಪ್ರಕರಣವನ್ನ ನ್ಯಾಯಾಂಗ ತನಿಖೆ ನಡೆಸಬೇಕು. ಶಾಂತಿ ಸುವ್ಯವಸ್ಥೆ ಮತ್ತು ಸಂತ್ರಸ್ತರ ಪುನರ್ವಸತಿಗೆ ಮುಂದಾಗಿ ಸಾಮಾನ್ಯ ಸ್ಥಿತಿ ಮರು ಸ್ಥಾಪಿಸಲು ಕ್ರಮ ವಹಿಸಬೇಕು. ಮಹಿಳೆಯರ ಘನತೆ ಕಾಪಾಡುವ ಮಾನವ ಹಕ್ಕುಗಳ ರಕ್ಷಣೆ ಯಾಗಬೇಕು. ಹಿಂಸಾಚಾರ ಪೀಡಿತರಿಗೆ ಕಠಿಣ ಶಿಕ್ಷೆ ಯಾಗಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯುನ ಎಂ.ಎಂ.ಶಿವಕುಮಾರ್, ಸಿ.ಕುಮಾರಿ, ಕರ್ನಾಟಕ ಪ್ರಾಂತ ರೈತ ಸಂಘದ ಟಿ.ಎಲ್.ಕೃಷ್ಣೇಗೌಡ, ಕೃಷಿ ಕೂಲಿಕಾರರ ಸಂಘದ ಬಿ.ಹನುಮೇಶ್, ಎಸ್.ಸುರೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net