ರಾಜ್ಯದಲ್ಲಿ ಹಿಂದುಗಳ ಹತ್ಯೆ ಖಂಡಿಸಿ ಧರಣಿ

20ss1pratibhatane pramukaru
Published on


ಕೊಡಗು : ಕೊಡಗಿನ ಸಿದ್ದಾಪುರದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿದ ಪ್ರಕರಣ ಸೇರಿದಂತೆ ರಾಜ್ಯದ ಇತರೆ ಭಾಗಗಳಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಪೈಶಾಚಿಕ ಕೃತ್ಯಗಳನ್ನು ಖಂಡಿಸಿ ಶನಿವಾರಸಂತೆಯಲ್ಲಿ ಶನಿವಾರ ಬಿಜೆಪಿ, ಜೆಡಿಎಸ್ ಹಾಗೂ ಸಂಘ-ಪರಿವಾರದಿಂದ ಶನಿವಾರಸಂತೆ ಪಟ್ಟಣದ ಕೆಆರ್‌ಸಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.


ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಸ್ತುವಾರಿ ಬಿ.ಬಿ.ಭಾರತೀಶ್ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೇಸರಿ ಶಾಲು ಹಾಕಿಕೊಂಡವರ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಲಾಗುತ್ತಿದೆ. ಕಾಂಗ್ರೆಸ್ ಬಂದ ಮೇಲೆ ಹಿಂದುಗಳ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ. ಜಿಹಾದಿಗಳ ಪೈಶಾಚಿಕ ಕೃತ್ಯಗಳು ಹೆಚ್ಚಾಗುತ್ತಿದೆ. ಇಷ್ಟೆಲ್ಲಾ ಆದರೂ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೌನ ತಾಳುವ ಮೂಲಕ ಒಳಗೊಳಗೆ ಪ್ರೋತ್ಸವ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.


ಕೊಡಗಿನ ಎರಡು ವಿಧಾನ ಸಭಾ ಕ್ಷೇತ್ರದಲ್ಲೀಗ 25 ಎಂಎಲ್‌ಎಗಳು ಹುಟ್ಟಿಕೊಂಡಿದ್ದಾರೆ. ಅಧಿಕಾರಿಗಳಿಗೆ ಕಚೇರಿಯಲ್ಲಿ ಕೆಲಸ ಮಾಡಲು ಬಿಡುತ್ತಿಲ್ಲ. ದೇಶವನ್ನು ಮುಸ್ಲಿಂ ರಾಷ್ಟ್ರ ಮಾಡಲು ಜಿಹಾದಿ ಮನಸ್ಥಿತಿಯವರ ಆಲೋಚನೆಯಾಗಿದೆ. ಆದರೆ ಇದು ಎಂದಿಗೂ ಸಾಧ್ಯವಾಗದು. ಇಂತಹ ಮನಸ್ಥಿಯನ್ನು ಮಟ್ಟ ಹಾಕಬೇಕಿದೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಮೋದಿ ಅವರು ಅಧಿಕಾರಕ್ಕೆ ಬರಬೇಕಾಗಿದೆ ಎಂದರು.


ಜಿಲ್ಲಾ ಬಿಜೆಪಿ ಒಬಿಸಿ ಘಟಕದ ಕಾರ್ಯದರ್ಶಿ ಎಸ್.ಎನ್.ರಘು ಮಾತನಾಡಿ, ಕಾಂಗ್ರೆಸ್ ಮುಸ್ಲಿಮರನ್ನು ಒಲೈಕೆ ಮಾಡುತ್ತಿದೆ. ಹುಬ್ಬಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣದಲ್ಲಿ ಮುಸ್ಲಿಂ ಸಂಘಟನೆಯ ದೊಡ್ಡ ಸಂಚು ನಡೆದಿದೆ ಎಂದು ಆರೋಪಿಸಿದರು. ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಬಿ.ಎಸ್.ಅನಂತ್‌ಕುಮಾರ್ ಮಾತನಾಡಿದರು.


ನಂತರ ಪ್ರತಿಭಟನೆಗಾರರು ಕಂದಾಯ ಇಲಾಖೆ ಕಚೇರಿಗೆ ತೆರಳಿ, ಕಂದಾಯ ಪರಿವೀಕ್ಷಕ ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಪ್ರಮುಖರಾದ ಮೋಕ್ಷಿತ್, ದಿನೇಶ್, ದಿಲೀಪ್, ಶರತ್‌ಚಂದ್ರ, ಎಚ್.ಆರ್.ಹರೀಶ್‌ಕುಮಾರ್, ಪುನಿತ್, ಸುರೇಶ್, ಅಶೋಕ್, ಯೋಗನಂದ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net