ರಾಜ್ಯಪಾಲರ ವಿರುದ್ಧ ಪ್ರತಿಭಟನೆ

12121
Published on

ದೊಡ್ಡಬಳ್ಳಾಪುರ: ಮುಡಾ ಹಗರಣದ ನೆಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ನೋಟಿಸ್ ಜಾರಿ ಮಾಡಿರುವುದನ್ನು ವಿರೋಧಿಸಿ ಜಿಲ್ಲಾ ಅಹಿಂದ ಸಂಘಟನೆಗಳ ಒಕ್ಕೂಟ, ಜಿಲ್ಲಾ ಶೋಷಿತ ಸಮುದಾಯಗಳ ಒಕ್ಕೂಟ ಜಂಟಿ ಸಹಭಾಗಿತ್ವದಲ್ಲಿ ಸೋಮವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಬೆಂಗಳೂರು-ಹಿಂದೂಪುರ ರಾಜ್ಯ ಹೆದ್ದಾರಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿದ ಮುಖಂಡರು, ಸಿಎಂ ಸಿದ್ದರಾಮಯ್ಯಗೆ ನೋಟಿಸ್ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ, ಧಿಕ್ಕಾರ ಕೂಗಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಪಾರ್ವತಿ ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆ ಎನ್ನಲಾದ ಸೈಟ್ ವಿಚಾರವಾಗಿ ಅಪರಾಧ ಹಿನ್ನೆಲೆಯ ಆರ್‌ಟಿಐ ಕಾರ್ಯಕರ್ತ ಟಿ.ಜೆ.ಅಬ್ರಾಹಂ ನೀಡಿದ ದೂರನ್ನು ರಾಜ್ಯಪಾಲರು ಕೂಲಂಕಷವಾಗಿ ಪರಿಶೀಲಿಸದೆ, ಕೇಂದ್ರದ ಒತ್ತಡಕ್ಕೆ ಮಣಿದು ಆತುರಾತುರವಾಗಿ ನೋಟಿಸ್ ನೀಡಿದ್ದಾರೆ ಎಂದು ಮುಖಂಡ ಜಿ.ಲಕ್ಷ್ಮೀಪತಿ ಆಪಾದಿಸಿದರು.

ಇದು ಹಿಂದುಳಿದ ವರ್ಗದ ನೇತಾರನನ್ನು ತುಳಿಯುವ ಹುನ್ನಾರವಾಗಿದೆ. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆ ನಡೆಸುತ್ತಿದೆ. ಆದರೆ, ತನಿಖಾ ವರದಿ ಬರುವ ಮುನ್ನವೇ ರಾಜ್ಯಪಾಲರು ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿಗೆ ನೋಟಿಸ್ ನೀಡುವ ಮೂಲಕ ಸಿದ್ದರಾಮಯ್ಯ ಅವರ ತೇಜೋವಧೆ ಮಾಡಲು ಹೊರಟಿದ್ದಾರೆ. ಮುಡಾ ಅಕ್ರಮದಲ್ಲಿ ಸಿಎಂ ಭಾಗಿಯಾಗಿದ್ದಾರೆ ಎಂದು ಯಾರೋ ಖಾಸಗಿ ವ್ಯಕ್ತಿ ದೂರು ನೀಡಿದ್ದಾರೆ ಎಂದು ದೂರಿದರು.

ದೂರಿನ ಪ್ರತಿಯನ್ನು ಸರಿಯಾಗಿ ಪರಿಶೀಲಿಸದೆ ಕೇವಲ ಒಂದೇ ದಿನದಲ್ಲಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡಿರುವುದು ಖಂಡನೀಯ. ಇದು ಕಾನೂನು ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಮುಖಂಡರು ಆರೋಪಿಸಿದರು. ಸಿದ್ದರಾಮಯ್ಯ ಹಿಂದುಳಿದ ವರ್ಗದವರ ನಾಯಕರಾಗಿದ್ದು, ನೋಟಿಸ್‌ನಿಂದ ವಿಚಲಿತರಾಗಿಲ್ಲ ಕಾನೂನು ಹೋರಾಟ ನಡೆಸಲಾಗುವುದು ಎಂದರು.

ಮುಖಂಡ ಕೃಷ್ಣಮೂರ್ತಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿರುವುದು ಹಿಂದುಳಿದವರಿಗೆ ಮಾಡಿದ ಅವಮಾನ. ಸರ್ಕಾರ ಸುಭದ್ರವಾಗಿದ್ದು, ಯಾವುದೇ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ಗುರುತಿಸಿಕೊಂಡವರೆ ಈಗ ಪಾದಯಾತ್ರೆ ನಾಟಕ ಆಡುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಪಾದಯಾತ್ರೆ ಕೇವಲ ಸುಳ್ಳಿನ ಪಾದಯಾತ್ರೆ, ಪೊಳ್ಳು, ಭ್ರಷ್ಟರ ಪಾದಯಾತ್ರೆ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net