

ದೇವದುರ್ಗ: ರಾಜ್ಯ ಸರ್ಕಾರ 2025-26ನೇ ಸಾಲಿನ ಬಜೆಟ್‌ನಲ್ಲಿ ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೊಳಿಸುವಂತೆ ಆಗ್ರಹಿಸಿ ಫೆ.7ರಂದು ಬೆಂಗಳೂರಿನ ಫ್ರೀಡ್‌ಂಪಾರ್ಕ್‌ನಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಪೊಲೀಸ್ ಪಾಟೀಲ್ ಹೇಳಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೊಳಿಸುವುದಾಗಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಎನ್‌ಪಿಎಸ್ ರದ್ದಿಗಾಗಿ 2022 ಅ.13ರಿಂದ ತಿಂಗಳು ಒಪಿಎಸ್ ಸಂಕಲ್ಪ ಯಾತ್ರೆ ಹಾಗೂ 14ದಿನಗಳ ಕಾಲ ಫ್ರೀಡ್‌ಂಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ನಡೆಸಲಾಗಿತ್ತು. ಅಂದು ಕಾಂಗ್ರೆಸ್ ನಾಯಕರು ನಮ್ಮ ಜತೆ ಸಭೆ ನಡೆಸಿ ಒಪಿಎಸ್ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರವಹಿಸಿಕೊಂಡ ನಂತರ ಸಂಘದ ಜತೆ 2023 ಜೂ.13ರಂದು ಗೃಹ ಕಚೇರಿಯಲ್ಲಿ ಸಭೆ ನಡೆಸಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಎನ್‌ಪಿಎಸ್ ಯೋಜನೆ ರದ್ದುಗೊಳಿಸುವ ಬಗ್ಗೆ ಸಚಿವರ ಜತೆ ಚರ್ಚಿಸುವುದಾಗಿ ಭರವಸೆ ನೀಡಿದ್ದರು. ಆದರೆ ರಾಜ್ಯ ಸರ್ಕಾರ ನೀಡಿದ ಭರವಸೆ ಒಂದೂವರೆಗೆ ವರ್ಷ ಕಳೆದರೂ ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ತಾಲೂಕು ಕಾರ್ಯದರ್ಶಿ ಅಭಿಷೇಕ ಹುಡೇದ್, ನಿರ್ದೇಶಕ ಶಾಂತಗೌಡ, ಭೀಮರಾಯ ಮೇಟಿ, ಶರಣಬಸವ ಇತರರಿದ್ದರು.