

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಬಿಜೆಪಿ ಕಾರ್ಯಕರ್ತರು ಮನಸ್ಸು ಮಾಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಗೆ ನುಗ್ಗಿ ಅವರನ್ನು ಹೊರ ಎಳೆದು ತರುವ ತಾಕತ್ತು ಇದೆ. ಆದರೆ ಬಿಜೆಪಿ ಸಂವಿಧಾನಕ್ಕೆ ಗೌರವ ಕೊಡುವ ಪಕ್ಷ, ಹೊಡೆಯುವುದು, ಬಡಿಯುವುದು ಕಾಂಗ್ರೆಸ್ ಸಂಸ್ಕೃತಿ ಎಂದು ಬಿಜೆಪಿ ರಾಜ್ಯನಾಯಕ ವಿಕಾಸ್ ಪುತ್ತೂರು ಹೇಳಿದರು.
ಬಿಜೆಪಿ ಯುವ ಮೋರ್ಚಾ ಬಂಟ್ವಾಳ ಮಂಡಲದ ವತಿಯಿಂದ ಐವನ್ ಡಿಸೋಜಾ ದೇಶದ್ರೋಹದ ಹೇಳಿಕೆ ಹಾಗೂ ರಾಜ್ಯಪಾಲರ ವಿರುದ್ಧ ಅವಾಚ್ಯ ಶಬ್ಧಗಳನ್ನು ಬಳಸಿರುವ ವಿರುದ್ಧವಾಗಿ ಬಂಟ್ವಾಳ ಯುವಮೋರ್ಚಾ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಎಫ್‌ಐಆರ್ ದಾಖಲಿಸಲು ವಿಳಂಬ ನೀತಿ ಅನುಸರಿಸುತ್ತಿರುವ ಪೊಲೀಸರು ಹಾಗೂ ಅದಕ್ಕೆ ಅಡ್ಡಿಪಡಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ಸಿ.ರೋಡಿನಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ದ.ಕ.ಜಿಲ್ಲೆಗೆ ಗೌರವವಿದೆ. ಇಲ್ಲಿನ ಜನಪ್ರತಿನಿಧಿಗಳನ್ನು ಗೌರವಯುತವಾಗಿ ಮೇಲ್ಪಂಕ್ತಿಯಲ್ಲಿ ನೋಡುವ ಕಾಲವಿತ್ತು. ಆದರೆ ಇಂದು ಕಾಂಗ್ರೆಸ್‌ನ ಐವನ್ ಡಿಸೋಜಾರಂತಹ ರಾಜಕಾರಣಿಗಳಿಂದ ಜಿಲ್ಲೆಗೆ ಅಗೌರವ ಬರುತ್ತಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅಯೋಗ್ಯ ಮುಖ್ಯಮಂತ್ರಿ. ಅವರ ಗ್ಯಾರಂಟಿ ಯೋಜನೆಗಳು ಜನರನ್ನು ತಲುಪಿಲ್ಲ, ಬದಲಾಗಿ ವಸ್ತುಗಳ ಬೆಲೆಯೇರಿಕೆಯಾಗಿದೆ ಎಂದು ಕಿಡಿಕಾರಿದರು. ಕೆಲಹೊತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ರಾಜ್ಯಸರ್ಕಾರದ ವಿರುದ್ಧ ಧಿಕ್ಕಾರ ಕೂಗಲಾಯಿತು.
ಶಾಸಕ ರಾಜೇಶ್ ನಾಕ್, ಬಿಜೆಪಿ ಮಂಡಲ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಪಕ್ಷದ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಸುಲೋಚನಾ ಭಟ್, ದಿನೇಶ್ ಭಂಡಾರಿ, ಅಶೋಕ್ ಶೆಟ್ಟಿ, ಪ್ರಭಾಕರ ಪ್ರಭು, ಪುರುಷೋತ್ತಮ ಶೆಟ್ಟಿ ವಾಮದಪದವು, ಪುರುಷೋತ್ತಮ ಸಾಲ್ಯಾನ್, ದಿನೇಶ್ ಅಮ್ಟೂರು, ಕಮಲಾಕ್ಷಿ ಪೂಜಾರಿ, ರಾಮದಾಸ್ ಬಂಟ್ವಾಳ, ಯಶೋಧರ ಕರ್ಬೆಟ್ಟು, ಗೋವಿಂದ ಪ್ರಭು, ರವೀಶ್ ಶೆಟ್ಟಿ ಕರ್ಕಳ, ಸುರೇಶ್ ಕೋಟ್ಯಾನ್, ಸುದರ್ಶನ ಬಜ, ಸಂದೇಶ್ ಶೆಟ್ಟಿ, ರಶ್ಮಿತ್ ಶೆಟ್ಟಿ, ಪ್ರಕಾಶ್ ಅಂಚನ್, ದಿನೇಶ್ ಶೆಟ್ಟಿ ದಂಬೆದಾರ್ ಹಾಜರಿದ್ದರು.