

ಕರ್ನಾಟಕ ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿರುವ ಕೇಂದ್ರ ಸರ್ಕಾರದ ನಡೆ ಖಂಡಿಸಿ ಮಂಗಳವಾರ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಮೈಸೂರು ಜಿಲ್ಲಾ ಸಂಘಟನಾ ಸಮಿತಿಯಿಂದ ಟೌನ್ ಹಾಲ್ ಮುಂಭಾಗದ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರ ಜುಲೈನಿಂದ 10 ಕೆಜಿ ಅಕ್ಕಿ ನೀಡುತ್ತಿರುವುದು ಸ್ವಾಗತಾರ್ಹ. ಆದರೆ, ಒಕ್ಕೂಟ ಸರ್ಕಾರ ರಾಜ್ಯಕ್ಕೆ ಹೆಚ್ಚುವರಿ ಆಹಾರ ಧಾನ್ಯ ನೀಡುವಲ್ಲಿ ಸಂಕುಚಿತ ರಾಜಕೀಯ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಒಕ್ಕೂಟ ಸರ್ಕಾರ ಬಡವರ ವಿರೋಧಿಯಾಗಿರುವುದು ಆಕ್ಷಮ್ಯ. ಒಪ್ಪಂದದ ಪ್ರಕಾರ ಒಕ್ಕೂಟ ಸರ್ಕಾರ ಭಾರತ ಆಹಾರ ನಿಗಮದ ಮೂಲಕ ಆಹಾರ ಧಾನ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೇಂದ್ರದ ಆಹಾರ ನಿಗಮದಲ್ಲಿ 7 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಆಹಾರ ಧಾನ್ಯವಿದೆ. ಬಡವರ ಹಸಿವು ನೀಗಿಸಲು ಅಕ್ಕಿ ಕೊಡುವಂತೆ ಕೇಳಿದರೂ ಮೋದಿ ಸರ್ಕಾರ ಕೊಡಲು ತಯಾರಿಲ್ಲ. ಖಾಸಗಿಯವರಿಗೆ ಅಕ್ಕಿ ಕೊಡಲು ಕೇಂದ್ರ ತಯಾರಾಗಿರುವುದು ಖಾಸಗಿ ಕಂಪನಿಗಳ ಪರ ತನ್ನ ಒಲವನ್ನು ತೋರಿಸುತ್ತದೆ ಎಂದು ಟೀಕಿಸಿದರು.
ರಾಜ್ಯದ ಬಹುತೇಕ ಬಿಜೆಪಿ ಸಂಸದರು ಜನರಿಗೆ ಆಹಾರ ಧಾನ್ಯದ ಬದಲು ನಗದು ವರ್ಗಾವಣೆ ಮಾಡುವಂತೆ ಸೂಚಿಸುವ ಬಿಜೆಪಿ ಧೋರಣೆಯೂ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ನೀತಿಯಾಗಿದೆ. ಜನ ವಿರೋಧಿ ರಾಜಕಾರಣ ಕೈ ಬಿಟ್ಟು ಒಪ್ಪಂದದಂತೆ ಅಕ್ಕಿ ಕೊಡುವಂತೆ ಪ್ರತಿಭಟನೆಯಲ್ಲಿ ಮುಖಂಡರು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ‌್ಯ, ಜಿಲ್ಲಾ ಸಮಿತಿ ಸದಸ್ಯರಾದ ಲ.ಜಗನ್ನಾಥ್, ಕೆ.ಬಸವರಾಜ್, ಜಯರಾಂ, ಸದಸ್ಯರಾದ ಬಾಲಾಜಿ ರಾವ್, ಬಲರಾಂ, ಬಸವಯ್ಯ, ಈಶ್ವರ್, ಶಾಕುಂತಲ, ಸೀನಪ್ಪ, ಸುಬ್ರಹ್ಮಣ್ಯ, ಚಂದ್ರಶೇಖರ್, ಎಂ.ಎಫ್.ಕಲಿಂ, ರಾಜ್ಯ ರೈತ ಸಂಘದ ಮಂಜುಕಿರಣ್, ಕೃಷ್ಟೇಗೌಡ, ದರ್ಶನ್, ಶಿವಕುಮಾರ್ ಸಂಬಯ್ಯ, ವರುಣ ನಾಗರಾಜ್ ಇದ್ದರು.