

ಮಡಿಕೇರಿ: ಇತ್ತೀಚೆಗೆ ಮಡಿಕೇರಿ ನಗರಸಭಾ ಸದಸ್ಯ ಹಾಗೂ ಮಡಿಕೇರಿ ಕೊಡವ ಸಮಾಜದ ನಿರ್ದೇಶಕರಾಗಿರುವ ಕಾಳಚಂಡ ಅಪ್ಪಣ್ಣ ಅವರ ಮೇಲೆ ಹಾಡುಹಗಲೇ ಹಲ್ಲೆ ಮಾಡಿದ ಘಟನೆಯ ಹಿನ್ನಲೆ ಮಡಿಕೇರಿ ಕೊಡವ ಸಮಾಜದ ನೇತ್ರತ್ವದಲ್ಲಿ ಕೊಡಗು ಜಿಲ್ಲೆಯ ಎಲ್ಲಾ ಕೊಡವ ಸಮಾಜ, ಗೌಡ ಸಮಾಜ ಹಾಗೂ ಇತರೆ ಹಲವು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಡಿಕೇರಿಯಲ್ಲಿ ತೀರ್ವ ಪ್ರತಿಭಟನೆ ನಡೆಯಿತು.
ಮಡಿಕೇರಿ ಕೊಡವ ಸಮಾಜದಿಂದ ನೂರಾರು ಸಂಖ್ಯೆಯಲ್ಲಿ ತೆರಳಿದ ಪ್ರತಿಭಟನೆಕಾರರು ಮಡಿಕೇರಿ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಹಲ್ಲೆಕೋರರ ವಿರುದ್ಧ ಘೋಷಣೆಯೊಂದಿಗೆ ಕಠಿಣ ಶಿಕ್ಷೆಯೊಂದಿಗೆ ಗಡಿಪಾರಿಗೆ ಒತ್ತಾಯಿಸಿದರು. ನಂತರ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟಣಕಾರರು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು ಇಲಾಖೆಯ ವತಿಯಿಂದ ಯಾವುದೇ ಪ್ರಭಾವಕ್ಕೆ ಒಳಗಾಗದೇ ಘಟನೆಗೆ ಕಾರಣಕರ್ತರ ವಿರುದ್ಧ ರೌಡಿಶೀಟರ್ ದಾಖಲಿಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿ ಒತ್ತಾಯಿಸಿದರು. ಇದರೊಂದಿಗೆ ಮಡಿಕೇರಿ ನಗರ ಸೇರಿದಂತೆ ಕೊಡಗು ಜಿಲ್ಲಾದ್ಯಂತ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳು ಹಾಗೂ ಗಾಂಜಾ ಮಾರಾಟ ಹತ್ತಿಕ್ಕುವಂತೆ ಒತ್ತಾಯಿಸಿದರು.
ನಂತರ ನಗರದ ನಗರಸಭೆಗೆ ತೆರಳಿದ ಪ್ರತಿಭಟಣಕಾರರು ನಗರಸಭಾ ಸದಸ್ಯನಿಗೆ ಹಲ್ಲೆ ಮಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅವರ ಜಾಗದ ವಿಷಯದಲ್ಲಿ ಊಹಾಪೋಹವನ್ನು ಪರಿಶೀಲಿಸಿ ಕಾನೂನು ವಿರುದ್ಧವಾಗಿ ಜಾಗವನ್ನು ಅಕ್ರಮಿಸಿಕೊಂಡಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಪ್ರತಿಭಟನೆಗೆ ಸಹರಿಸಿದ ಎಲ್ಲಾ ಕೊಡವ ಸಮಾಜ ಹಾಗೂ ಸಂಘ ಸಂಸ್ಥೆಗಳಿಗೆ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ ಸ್ವಾಗತಿಸಿ ಕಾರ್ಯದರ್ಶಿ ಕನ್ನಂಡ ಸಂಪತ್ ವಂದಿಸಿದರು.