ತಹಸೀಲ್ದಾರ್ ವಿರುದ್ಧ ಪ್ರತಿಭಟನೆ

29 KRN-1
Published on

ಕೆ.ಆರ್.ನಗರ: ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕುಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಿತರಕ್ಷಣಾ ಸಮಿತಿ ಸಭೆಗೆ ಆಹ್ವಾನಿಸಿಲ್ಲ ಎಂಬ ಕಾರಣಕ್ಕೆ ದಲಿತ ಮುಖಂಡರು ಹಾಗೂ ಕೆ.ಆರ್. ನಗರ ತಹಸೀಲ್ದಾರ್ ನಡುವೆ ವಾಗ್ವಾದ ನಡೆಯಿತು.


ಸೋಮವಾರ ಆಯೋಜಿಸಿದ್ದ ಸಭೆಗೆ ಕೆಲ ದಲಿತ ಮುಖಂಡರು ನಮ್ಮನ್ನು ಹಾಗೂ ಕ್ಷೇತ್ರದ ಶಾಸಕರನ್ನು ಕರೆದಿಲ್ಲ ಏಕೆ ಎಂದು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಅವರನ್ನು ಪ್ರಶ್ನಿಸಿದರು. ಈ ಸಂದರ್ಭ ಮಾತನಾಡಿದ ಪೂರ್ಣಿಮಾ ಒಬ್ಬ ಮಹಿಳಾ ಅಧಿಕಾರಿಯ ಜತೆ ಸೌಜನ್ಯದಿಂದ ವರ್ತಿಸಬೇಕು. ನಿಮ್ಮ ಅಂಬೇಡ್ಕರ್ ಇದನ್ನೇ ಹೇಳಿರುವುದಾ ಎಂದು ಪ್ರಶ್ನಿಸಿದರು.


ಈ ಹೇಳಿಕೆಯಿಂದ ಅಸಮಾಧಾನಗೊಂಡ ದಲಿತ ಮುಖಂಡರು ಅಂಬೇಡ್ಕರ್ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ ಎಂದು ತಹಸೀಲ್ದಾರ್ ವಿರುದ್ಧ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.


ಕೊನೆಗೆ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಕ್ಷಮೆಯಾಚಿಸುವ ಸನ್ನಿವೇಶವೂ ಏರ್ಪಟ್ಟಿತು. ಕೆ.ಆರ್.ನಗರ ತಹಸೀಲ್ದಾರ್ ಪೂರ್ಣಿಮಾ ವಿರುದ್ಧ ಕ್ರಮವಹಿಸುವಂತೆ ಆಗ್ರಹಿಸಿ ಸಾಲಿಗ್ರಾಮ ತಹಸೀಲ್ದಾರ್ ನರಗುಂದ ಮೂಲಕ ಸರ್ಕಾರಕ್ಕೆ ದಲಿತ ಮುಖಂಡರು ಮನವಿ ಪತ್ರ ಸಲ್ಲಿಸಿದರು.


ದಲಿತ ಮುಖಂಡ ಹನಸೋಗೆನಾಗರಾಜ್, ಗುರುಸ್ವಾಮಿ, ಹಂಪಾಪುರ ಕುಮಾರ್, ಸಿದ್ದಾಪುರ ಕಾಳಯ್ಯ, ಹಂಪಾಪುರ ಸುರೇಶ್, ಜೆಲ್ಲಿ ಮಂಜು, ತಾಪಂ ಮಾಜಿ ಸದಸ್ಯ ಶ್ರೀನಿವಾಸಪ್ರಸಾದ್, ದೊಡ್ಡವಡ್ಡರಗುಡಿ ನಂದೀಶ್, ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷ ನರಸಿಂಹನಾಯಕ, ಸಿ.ಸಿ.ಮಹದೇವ್, ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ಗುರುಸ್ವಾಮಿ, ಜಯರಾಮ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net