ಬಳ್ಳಾರಿ : ಸಂವಿಧಾನಬಾಹಿರವಾಗಿ 18 ಬಿಜೆಪಿ ಶಾಸಕರನ್ನು ಅಮಾನತು, ಗುತ್ತಿಗೆಯಲ್ಲಿ ಧರ್ಮಾಧಾರಿತ ಮೀಸಲಾತಿ ವಿರೋಧಿಸಿ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ದುರ್ಬಳಕೆ ಖಂಡಿಸಿ ಇಲ್ಲಿನ ಗಡಗಿ ಚೆನ್ನಪ್ಪ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಘಟಕದಿಂದ ಸೋಮವಾರ ಪ್ರತಿಭಟನೆ ನಡೆಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ ಮಾತನಾಡಿ, ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಮುಸ್ಲಿಂ ಸಮುದಾಯಕ್ಕೆ ಗುತ್ತಿಗೆಯಲ್ಲಿ ಮೀಸಲಾತಿ ನೀಡಿದೆ. ಈ ರೀತಿ ಮಾಡುವುದು ಸಂವಿಧಾನದ ವಿರೋಯಾಗಿದೆ. ಅಲ್ಲದೇ ಇತ್ತೀಚೆಗೆ ಅಧಿವೇಶನದಲ್ಲಿ ಸ್ಪೀಕರ್ ಬಳಸಿಕೊಂಡು 18 ಬಿಜೆಪಿ ಶಾಸಕರನ್ನ ಅಮಾನತು ಮಾಡಿರುವುದು ಖಂಡನೀಯವಾಗಿದೆ. ಕೂಡಲೇ ಧರ್ಮಾಧಾರಿತ ಮೀಸಲಾತಿ ಹಾಗೂ ಶಾಸಕರ ಅಮಾನತ್ತು ವಾಪಾಸ್ ಪಡೆಯಬೇಕು. ಇಲ್ಲದಿದ್ದರೇ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ವಿದ್ಯುತ್ ಬಿಲ್, ಬಸ್ ದರ, ರೈತರ ಪಹಣಿ ದರವನ್ನು ಸಹ ಹೆಚ್ಚಿಗೆ ಮಾಡಿದ್ದಾರೆ. ಎಸ್‌ಸಿ, ಎಸ್ಟಿ ನಿಗಮಗಳ ಹಣವನ್ನು ದುರ್ಬಳಕೆ ಮಾಡಿದ್ದಾರೆ. ಜನತೆ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಎಸೆಯಬೇಕಾಗಿದೆ ಎಂದು ತಿಳಿಸಿದರು.
ಬಳಿಕ ಪ್ರತಿಭಟನೆ ವೇಳೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಕಾರ್ಯಕರ್ತರು ಸಿಎಂ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು. ಸಿಎಂ ಪ್ರತಿಕೃತಿ ದಹನದ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಪೊಲೀಸರು ನೀರು ಸುರಿದ ಪ್ರತಿಕೃತಿ ದಹನದ ಬೆಂಕಿಯನ್ನು ನಂದಿಸಿದರು.