ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಕ್ಕೆ ಆಕ್ರೋಶ: ರಾಜ್ಯಸರ್ಕಾರದ ವಿರುದ್ಧ ಪ್ರತಿಭಟನೆ

Protest against state government Mandya
Published on

ಮಂಡ್ಯ: ವಕ್ಫ್ ಕಾಯ್ದೆಗೆ ಕೇಂದ್ರ ಸರ್ಕಾರ ಯಾವುದೇ ರೀತಿ ತಿದ್ದುಪಡಿ ತರಬಾರದೆಂದು ಒತ್ತಾಯಿಸಲು ರಾಜ್ಯ ಸರ್ಕಾರ ವಿಧಾನ ಮಂಡಲ ಅಧಿವೇಶನದಲ್ಲಿ ನಿರ್ಣಯ ಕೈಗೊಂಡಿರುವುದನ್ನು ವಿರೋಧಿಸಿ ವಕ್ಫ್ ಕಾಯ್ದೆ ವಿರೋಧಿ ರೈತ ಒಕ್ಕೂಟದಿಂದ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಒಕ್ಕೂಟದ ಪದಾಧಿಕಾರಿಗಳು, ರಾಜ್ಯದ ರೈತರು, ಸಮಾಜ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ವಿಧಾನಮಂಡಲದಲ್ಲಿ ರಾಜ್ಯ ಸರ್ಕಾರ ಅಂಗೀಕರಿಸಿದ ನಿರ್ಣಯಕ್ಕೆ ಸಹಿ ಹಾಕದೆ ಹಾಗೂ ಅನುಮೋದಿಸಬಾರದೆಂದು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲ ಥಾವರ್ ಚಂದ್‌ಗೆಹಲೋತ್‌ಗೆ ಮನವಿ ಸಲ್ಲಿಸಿದರು.

ರಾಜ್ಯದ ಸಾವಿರಾರು ರೈತರ ಜಮೀನು, ಮಠ-ಮಂದಿರ, ಸ್ಮಶಾನ, ಸಾರ್ವಜನಿಕ ಆಸ್ತಿ, ಸರ್ಕಾರದ ಆಸ್ತಿ, ಸರ್ಕಾರಿ ಶಾಲೆಗಳು ಹೀಗೆ ಸಮಾಜದ ಎಲ್ಲ ವಿಭಾಗಗಳ ಆಸ್ತಿಗಳನ್ನು ವಕ್ಫ್ ಮಂಡಳಿ ಎಗ್ಗಿಲ್ಲದೆ ಕಬಳಿಸುತ್ತಾ ಬರುತ್ತಿದೆ. ಇದು ನಮ್ಮ ರಾಜ್ಯ ಮಾತ್ರವಲ್ಲ, ಇಡೀ ದೇಶದ ಸಮಸ್ಯೆ. ಈ ವಿಚಾರವಾಗಿ ರಾಜ್ಯಾದ್ಯಂತ ರೈತರು, ಕನ್ನಡ, ದಲಿತ ಸಂಘಟನೆಗಳು ಪ್ರತಿಭಟಿಸಿ ಹೋರಾಟ ಮಾಡುತ್ತಿದ್ದೇವೆ. ದೇಶಕ್ಕೆ ಮಾರಕವಾದ ಈ ವಕ್ಫ್ ಕಾಯ್ದೆಗೆ ತಿದ್ದುಪಡಿಯನ್ನು ತರಲು ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಮಂಡಿಸುತ್ತಿರುವಾಗ, ರಾಜ್ಯ ಸರ್ಕಾರ ವಿಧಾನ ಮಂಡಲದಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಬಾರದು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಅಂಗೀಕಾರದ ನಿರ್ಣಯ ತೆಗೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿರೋಧ ಪಕ್ಷದವರು ಪ್ರತಿಭಟಿಸಿ, ಸಭಾತ್ಯಾಗ ಮಾಡಿದ್ದರೂ ಇದು ರಾಜ್ಯದ ರೈತರು ಹಾಗೂ ಬಹುಸಂಖ್ಯಾತರಿಗೆ ಮಾಡಿರುವ ದ್ರೋಹ. ಕೇವಲ ಮತ ಬ್ಯಾಂಕ್ ಉದ್ದೇಶಕ್ಕಾಗಿ ಮುಸ್ಲಿಂ ಸಮುದಾಯ ಓಲೈಸಲು ಈ ನಿರ್ಣಯ ತೆಗೆದುಕೊಂಡಿದೆ. ಹಿಂದುಳಿದ ವರ್ಗಗಳ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹೀಗೆ ಸಮಾಜದ ಎಲ್ಲ ವರ್ಗಗಳ ರೈತರ ಜಮೀನುಗಳನ್ನು ವಕ್ಫ್ ಮಂಡಳಿ ಕಬಳಿಸುತ್ತಿರುವಾಗ ಪಹಣಿಯ ಕಾಲಂ ನಂ.11 ರಲ್ಲಿ ರೈತರ ಜಮೀನುಗಳು ಸೇರಿದ್ದರೆ ತೆಗೆದು ಹಾಕುತ್ತೇವೆ. ಯಾವ ರೈತರ ಜಮೀನಿನ ಮೇಲೂ ಇನ್ನು ಮುಂದೆ ಕಾಲಂ ನಂ.11 ರಲ್ಲಿ ವಕ್ಫ್ ಎಂದು ಬರುವುದಿಲ್ಲ ಮುಖ್ಯಮಂತ್ರಿ ಹೇಳಿದ್ದರು. ಆದರೆ, ಅದು ಕೇವಲ ಹೇಳಿಕೆಯಾಗಿ ಉಳಿದುಕೊಂಡಿದೆ. ರೈತರು, ಸಮಾಜ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಅಂಗೀಕರಿಸಿದ ನಿರ್ಣಯಕ್ಕೆ ಸಹಿ ಹಾಕದೆ ಹಾಗೂ ಅನುಮೋದಿಸದೆ ರಾಜ್ಯದ ರೈತರ ಬದುಕನ್ನು ಉಳಿಸಬೇಕೆಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ್ ಸಂಘದ ಪ್ರಾಂತೀಯ ಅಧ್ಯಕ್ಷ ಹಾಡ್ಯ ರಮೇಶ್ ರಾಜು, ಜಿಲ್ಲಾಧ್ಯಕ್ಷ ಅಪ್ಪಾಜಿ ಹಳೇಬೂದನೂರು, ಕದಂಬ ಸೈನ್ಯ ಸಂಘಟನೆ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ಜಿಲ್ಲಾಧ್ಯಕ್ಷ ಜೋಸ್ೆ ರಾಮು ಕೀಲಾರ, ಕದಸಂಸ ಕೃಷ್ಣಪ್ಪ, ಸ್ವಾಭಿಮಾನ ಬಣ ಜಿಲ್ಲಾ ಸಂಚಾಲಕ ಮೋಹನ್ ಚಿಕ್ಕಮಂಡ್ಯ, ರೈತ ಪರ ಹೋರಾಟಗಾರರ ಸಂಘದ ರಾಜ್ಯಾಧ್ಯಕ್ಷ ಹೆಮ್ಮಿಗೆ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಬಿ.ರಮೇಶ್, ರಾಜ್ಯ ಉಪಾಧ್ಯಕ್ಷ ಎಂ.ಕೆ.ಸಂಜಯ್ ಕುಮಾರ್, ಕಿಸಾನ್ ಸಂಘದ ಜಿಲ್ಲಾ ಪ್ರಮುಖ್ ಹೊಳಲು ಶಿವಣ್ಣ, ಅಚ್ಯುತ ತೂಬಿನಕೆರೆ, ರುದ್ರಪ್ಪ ಬೂದನೂರು, ಪುಟ್ಟಮ್ಮ ಶ್ರೀಕಂಠೇಗೌಡ, ದುರ್ಗೇಶ್ ಪಾಂಡವಪುರ, ಕರವೇ ಜಿಲ್ಲಾಧ್ಯಕ್ಷ ಡಿ.ಅಶೋಕ್, ಡಿ.ಮೋಹನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net