ವಿವಿಧ ಸಂಘಟನೆಗಳಿಂದ 17ರಂದು ಪ್ರತಿಭಟನೆ,  ಧರ್ಮಸ್ಥಳ ಉಳಿವಿಗಾಗಿ ಬ್ರಾಹ್ಮಣ, ಬಂಟ, ಬಿಲ್ಲವ ಸೇರಿ ವಿವಿಧ ಸಂಘಟನೆಗಳಿಂದ ಹೋರಾಟ

IMG_20250813_111946_770.jpg
Published on

ಹುಬ್ಬಳ್ಳಿ: ದಕ್ಷಿಣ ಕನ್ನಡದ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ಬಗ್ಗೆ ಕೆಲವರು ಸುಳ್ಳು ಪ್ರಚಾರ ಮಾಡುತ್ತಿದ್ದು, ಇದನ್ನು ಖಂಡಿಸಿ ಆಗಸ್ಟ್ 17ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಹುಬ್ಬಳ್ಳಿ -ಧಾರವಾಡ ಬಂಟರ ಸಂಘದ ಅಧ್ಯಕ್ಷ ವಿಜಯಾನಂದ ಶೆಟ್ಟಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಸಮಾಜಘಾತುಕ ಶಕ್ತಿಗಳು ಶ್ರೀಕ್ಷೇತ್ರ ಧರ್ಮಸ್ಥಳವನ್ನು ವಿವಾದಕ್ಕೀಡು ಮಾಡುತ್ತಿವೆ. ಹೂತಿಟ್ಟ ಶವ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಎಸ್ಐಟಿ ತನಿಖೆ ನಡೆಯುತ್ತಿದೆ, ತನಿಖೆ ಪೂರ್ಣಗೊಂಡಿಲ್ಲ. ಆದರೂ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಧರ್ಮಸ್ಥಳ ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ. ಇದು ಖಂಡನೀಯ ಎಂದರು.

ಸಾಮಾಜಿಕ ಜಾಲತಾಣದಲ್ಲಿ ಬಂದ ಸುದ್ದಿ ಆಧಾರದ ಮೇಲೆ ಕರ್ನಾಟಕ ಸರ್ಕಾರವು ಸುಮೊಟೊ ಪ್ರಕರಣ ದಾಖಲಿಸಿ ಎಸ್ಐಟಿ ರಚನೆ ಮಾಡಿದೆ. ಅದರಂತೆ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧವೂ ಸುಮೊಟೊ ಕೇಸ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಂಘದ ಅಧ್ಯಕ್ಷ ಅನಂತ ಪದ್ಮನಾಭ ಐತಾಳ ಮಾತನಾಡಿ, ಕೋಟ್ಯಂತರ ಭಕ್ತರ ಆರಾಧ್ಯದೈವ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಖಂಡನೀಯ. ಅರ್ಧಂಬರ್ಧ ತಿಳಿದುಕೊಂಡ ಕೆಲವರು ಶ್ರೀ ಮಂಜುನಾಥಸ್ವಾಮಿಯ ಭಕ್ತರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಧಾರ್ಮಿಕ ನಂಬಿಕೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಇದರ ವಿರುದ್ಧ ನಾವು ಹೋರಾಟ ಹಮ್ಮಿಕೊಂಡಿದ್ದೇವೆ ಎಂದರು.

ಸಮಾಜದ ಮುಖಂಡ ಸಿಎ ಎಸ್.ಬಿ. ಶೆಟ್ಟಿ ಮಾತನಾಡಿ, ಕೆಲವೇ ಕೆಲವರು ಸಾಮಾಜಿಕ ಜಾಲತಾಣ ಬಳಸಿಕೊಂಡು ಕ್ಷೇತ್ರದ ಪಾವಿತ್ರ್ಯ ಹಾಳು ಮಾಡುತ್ತಿದ್ದಾರೆ. ಇದು ನಿಲ್ಲಬೇಕು. ಪ್ರಕರಣದ ತನಿಖೆ ನಡೆಯುವ ಸಂದರ್ಭದಲ್ಲಿ ತೀರ್ಪು ನೀಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಈ ಷಡ್ಯಂತ್ರದ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದರು.

ಉದ್ಯಮಿ ರಾಜೇಂದ್ರ ಶೆಟ್ಟಿ ಮಾತನಾಡಿ, ಧರ್ಮಸ್ಥಳದ ಉಳಿವಿಗಾಗಿ ನಾವೆಲ್ಲ ಎಂತಹದೇ ಹೋರಾಟಕ್ಕೆ ಸಿದ್ಧರಾಗಿದ್ದೇವೆ. ಅಗತ್ಯ ಬಿದ್ದರೆ ಅಪಪ್ರಚಾರ ಮಾಡುವವರ ವಿರುದ್ಧ ಕೇಸ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಆ. 17ರಂದು ಬೆಳಗ್ಗೆ 11ಕ್ಕೆ ಹುಬ್ಬಳ್ಳಿಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಚನ್ನಮ್ಮ ವೃತ್ತದಲ್ಲಿ ಸಭೆಯಾಗಿ ಮಾರ್ಪಡಲಿದೆ. ನಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗವುದು ಎಂದು ತಿಳಿಸಿದರು.

ಸಂಘದ ರತ್ನಾಕರ ಶೆಟ್ಟಿ, ಸತೀಶ ಶೆಟ್ಟಿ, ದಿನೇಶ ಶೆಟ್ಟಿ, ಬಿಲ್ಲವ ಸಮುದಾಯದ ಕಾರ್ಯದರ್ಶಿ ವಿವೇಕ ಪೂಜಾರಿ, ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ರತ್ನಾಕರ ಗೌಡ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net