

ಹುಣಸೂರು: ತಿ.ನರಸೀಪುರ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ವಾಸವಿದ್ದ 70ಕ್ಕೂ ಹೆಚ್ಚು ಮಾದಿಗ ಸಮಾಜದ ಕುಟುಂಬಗಳ ಗುಡಿಸಲುಗಳನ್ನು ರಾತ್ರೋರಾತ್ರಿ ಕೆಡವಿ ಹಾಕಿರುವ ಘಟನೆಯನ್ನು ಖಂಡಿಸಿ ತಾಲೂಕು ಮಾದಿಗ ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಮಿತಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಬೆಳ್ತೂರು, ಗೋಪಾಲಪುರದ ಸರ್ವೇ ನಂ.7ರಲ್ಲಿ ದಿವಂಗತ ರಾಜ್ಯಪಾಲ ಎನ್.ರಾಚಯ್ಯ ಅವರ ಆಡಳಿತಾವಧಿಯಲ್ಲಿ ಭೂಮಿಯನ್ನು ಖರೀದಿಸಿ ಮಾದಿಗ ಸಮಾಜಕ್ಕೆ ಮಂಜೂರು ಮಾಡಲಾಗಿತ್ತು. ಈ ಜಾಗದಲ್ಲಿ ಮೂರು ತಲೆಮಾರುಗಳಿಂದ ಮಾದಿಗ ಕುಟುಂಬಗಳು ವಾಸವಿದ್ದವು. ಇದೀಗ 70ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದವು. ಆದರೆ, ಕಳೆದ ಜೂ.26ರ ಮಧ್ಯರಾತ್ರಿ 2.30ಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಮೌಖಿಕ ಆದೇಶದಂತೆ ಪೊಲೀಸರು ಸ್ಥಳಕ್ಕೆ ದಾವಿಸಿ ಗುಡಿಸಲುಗಳು ಮತ್ತು ಮಾದಿಗರು ಪೂಜಿಸುತ್ತಿದ್ದ ದಂಡಿನ ಮಾರಮ್ಮ ದೇವಾಲಯವನ್ನು ಜೆಸಿಬಿ ಬಳಸಿ ಕೆಡವಿದ್ದಾರೆ. ಇದು ಖಂಡನೀಯ, ಇತ್ತೀಚೆಗೆ ಒಳಮೀಸಲಾತಿ ಹೋರಾಟದಲ್ಲಿ ಗೋಪಾಲಪುರದ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಎನ್ನುವ ಒಂದೇ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಬಡದಲಿತರ ಮೇಲೆ ಅಮಾನವೀಯ ಕ್ರೌರ್ಯ ಮೆರೆದಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಅಲ್ಲದೇ, ಜಿಲ್ಲಾಡಳಿತದಿಂದ ಯಾವುದೇ ನೋಟಿಸ್ ನೀಡದೆ ತೆರವು ಕಾರ್ಯ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಈ ಕೂಡಲೇ ದಲಿತ ಕುಟುಂಬಗಳಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕು. ಈ ದೌರ್ಜನ್ಯಕ್ಕೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಮುಖಂಡ ರಾಯನಹಳ್ಳಿ ಸ್ವಾಮಿ ಮಾತನಾಡಿ, ಅನ್ಯಾಯವನ್ನು ಪ್ರಶ್ನಿಸಿ ಯುವಕರು ಪ್ರತಿಭಟನೆ ನಡೆಸಲು ಪೊಲೀಸರಲ್ಲಿ ಅನುಮತಿ ಕೋರಿದಾಗ ಪೋಲೀಸರು ಅನುಮತಿ ನಿರಾಕರಿಸಿ, ಹೆದರಿಸಿ ಬೆದರಿಸಿ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿರುವುದು ಪ್ರಜಾತಂತ್ರ ವಿರೋಧಿ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರೇಡ್ 2 ತಹಸೀಲ್ದಾರ್ ನರಸಿಂಹಯ್ಯ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಈ ವೇಳೆ ಸಮಿತಿ ಅಧ್ಯಕ್ಷ ಪರಶುರಾಮ್, ಆಶ್ರಮ ಸಮಿತಿ ಮಾಜಿ ಸದಸ್ಯ ಎಸ್.ಕಿಟ್ಟು, ಉಪಾಧ್ಯಕ್ಷ ರಾಜಶೇಖರ್, ಸಹಕಾರ್ಯದರ್ಶಿ ಎಚ್.ಎಸ್.ಶಿವರಾಮ್, ರವೀಶ್ ಹೆಮ್ಮಿಗೆ, ಮಹದೇವ್ ತಮ್ಮಡಹಳ್ಳಿ, ಹೊಸೂರು ಗೋವಿಂದ, ಪರಶುರಾಮ, ಶ್ರೀನಿವಾಸ್, ವರದರಾಜು, ವೆಂಕಟೇಶಯ್ಯ ಇತರರು ಇದ್ದರು.