ಸೀಲ್​ಡೌನ್ ತೆರವಿಗೆ ಆಗ್ರಹಿಸಿ ಪ್ರತಿಭಟನೆ

02 svr 01
Published on

ವಿಜಯವಾಣಿ ಸುದ್ದಿಜಾಲ ಸವಣೂರ

ಕರೊನಾ ಸೋಂಕಿತರು ಸಂರ್ಪಣ ಗುಣವಾಗಿದ್ದರು ಸಹ ಪಟ್ಟಣದ ಎಸ್.ಎಂ. ಕೃಷ್ಣ ನಗರದಲ್ಲಿನ ಸೀಲ್​ಡೌನ್ ತೆರವುಗೊಳಿಸದಿರುವುದನ್ನು ಖಂಡಿಸಿ ಸ್ಥಳೀಯರು ಮಂಗಳವಾರ ಪ್ರತಿಭಟನೆ ನಡೆಸಿದರು.

ಬೆಳಗ್ಗೆ ಅನವಶ್ಯಕವಾಗಿ ಓಡಾಡುತ್ತಿದ್ದ ಯುವಕನೊಬ್ಬನಿಗೆ ಪೊಲೀಸ್ ಕಾನ್​ಸ್ಟೇಬಲ್ ಲಾಠಿ ರುಚಿ ತೋರಿಸಿದ್ದು, ‘ಮೇ 31ರ ನಂತರ ಸೀಲ್​ಡೌನ್ ತೆರವುಗೊಳಿಸಬಹುದು’ ಎಂಬ ಗಾಳಿ ಸುದ್ದಿ ನಂಬಿ ಕಾಯುತ್ತ ಕುಳಿತಿದ್ದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಹೀಗಾಗಿ ಸ್ಥಳೀಯರೆಲ್ಲರೂ ಸೇರಿ ಸೀಲ್​ಡೌನ್ ಸಂಪೂರ್ಣ ತೆರವುಗೊಳಿಸಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆಗೆ ಕುಳಿತರು.

ಅಂಜುಮನ್ ಸಂಸ್ಥೆಯ ಅಧ್ಯಕ್ಷ ಜೀಶಾನಖಾನ್ ಪಠಾಣ, ಪುರಸಭೆ ಮಾಜಿ ಅಧ್ಯಕ್ಷ ಖಲಂದರ್​ಅಹ್ಮದ್ ಅಕ್ಕೂರ ಹಾಗೂ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು ಸಹ ಯಾವುದೇ ಪ್ರಯೋಜನವಾಗಲಿಲ್ಲ.

ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿ, ಜಿಲ್ಲೆಯಲ್ಲಿ ಇದೇ ಸ್ಥಳದಿಂದ ಪ್ರಥಮ ಹಂತದ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರು ಗುಣವಾಗುವ ಮೊದಲೇ ಮತ್ತೊಂದು ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಸೀಲ್​ಡೌನ್ ಮುಂದುವರಿಸಲಾಗಿದೆ. ಜಿಲ್ಲಾ ಆಡಳಿತದ ಆದೇಶ ಬಂದ ನಂತರ ಸೀಲ್​ಡೌನ್ ತೆರವುಗೊಳಿಸಲಾಗುವುದು. ಇಲ್ಲಿಯವರೆಗೆ ನೀಡಿದ ಸಹಕಾರ ಮುಂದುವರಿಸಬೇಕು ಎಂದು ಮನವಿ ಮಾಡಿದರು.

ಸ್ಥಳೀಯ ಪ್ರಮುಖರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲು ಕೋರಿಕೊಂಡ ಹಿನ್ನೆಲೆಯಲ್ಲಿ, ಸೀಲ್​ಡೌನ್ ಪ್ರದೇಶದ ನಿವಾಸಿಗಳ ಪರವಾಗಿ ಪಟ್ಟಣದ ಅಂಜುಮನ್ ಸಂಸ್ಥೆ ಅಧ್ಯಕ್ಷ ಜೀಶಾನಖಾನ್ ಪಠಾಣ ಹಾಗೂ ಪ್ರಮುಖರು ಜಿಲ್ಲಾಧಿಕಾರಿ ಭೇಟಿ ಮಾಡಿ ಮನವಿ ಸಲ್ಲಿಸಲು ಅನುವು ಮಾಡಿಕೊಡಲಾಗುವುದು ಎಂದು ಮನವರಿಕೆ ಮಾಡಿಕೊಟ್ಟ ನಂತರ ಪ್ರತಿಭಟನೆ ಕೈಬಿಡಲಾಯಿತು.

ತಾ.ಪಂ. ಎಡಿ ಎಸ್.ಎಚ್. ಅಮರಾಪೂರ, ಪಿಎಸ್​ಐ ಎಚ್.ಎಸ್. ಶಿವಣ್ಣವರ, ಎಎಸ್​ಐ ಎಂ.ಎಸ್. ದೊಡ್ಡಮನಿ, ಎಎಸ್​ಐ ಎಂ.ವಿ. ಶಿರಹಟ್ಟಿ, ಡಬ್ಲ್ಯುಎಎಸ್​ಐ ಜಿ.ವಿ. ಹೊನ್ನಳ್ಳಿ, ಗ್ರಾಮ ಲೆಕ್ಕಾಧಿಕಾರಿಗಳಾದ ರವಿ ಮಾಚಕನೂರ, ನಾಗರಾಜ ಹೊಸಮನಿ, ವೇಂಕಟೇಶ ಲಮಾಣಿ, ಇತರರು ಇದ್ದರು.

ಪೊಲೀಸರ ಹರಸಾಹಸ: ಪರಸ್ಪರ ಅಂತರ ಮರೆತ ಪ್ರತಿಭಟನಾಕರರನ್ನು ಚದುರಿಸಲು ಪೊಲೀಸ್ ಸಿಬ್ಬಂದಿ ಹರಸಾಹಸ ಪಟ್ಟರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಕರೊನಾ ಆತಂಕ ಮರೆತು ನೂರಾರು ಜನರು ಮೂರ್ನಾಲ್ಕು ಗಂಟೆಗಳ ಕಾಲ ಒಂದೆಡೆ ಸೇರಿ ಪ್ರತಿಭಟನೆ ನಡೆಸಿದ್ದು ಮತ್ತಷ್ಟು ಆತಂಕ ಹೆಚ್ಚುವಂತೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net